ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಸು ಫ್ರಮ್ ಸೋ’ ಸಿನಿಮಾ ಮೂರನೇ ವಾರದಲ್ಲೂ ತನ್ನ ಯಶಸ್ಸಿನ ಹಾದಿಯನ್ನು ಮುಂದುವರಿಸಿಕೊಂಡಿದೆ. ಚಿತ್ರದ ಕಲೆಕ್ಷನ್ ಆರಂಭದ ದಿನಗಳಂತೆಯೇ ಸತತವಾಗಿ ಸಾಗುತ್ತಿದ್ದು, 10 ದಿನಗಳಲ್ಲಿ 3 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಸಾಧಿಸಿದ್ದು ವಿಶೇಷ. ಇದೀಗ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು 60 ಕೋಟಿ ರೂಪಾಯಿ ವಸೂಲಿ ಮಾಡಿ ಸಿನಿಮಾ ಗಮನ ಸೆಳೆದಿದೆ. ಕೇವಲ 15 ದಿನಗಳಲ್ಲಿ ಹಲವು ಹೊಸ ದಾಖಲೆಗಳನ್ನು ಈ ಚಿತ್ರ ಬರೆಯಲು ಯಶಸ್ವಿಯಾಗಿದೆ.
ಚಿತ್ರ ತೆಲುಗು ಭಾಷೆಯಲ್ಲಿಯೂ ಆಗಸ್ಟ್ 8ರಿಂದ ಪ್ರದರ್ಶನ ಕಾಣುತ್ತಿದ್ದು, ಅಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರಿಗೆ ಸಿನಿಮಾ ಮೆಚ್ಚುಗೆಯಾಗಿದ್ದರೆ, ಕೆಲವರು ಎವರೇಜ್ ಎಂದು ಅಭಿಪ್ರಾಯಪಟ್ಟಿದ್ದಾರೆ. ಮಂಗಳೂರು ಕನ್ನಡದ ಭಾಷೆಯ ವೈಶಿಷ್ಟ್ಯ ತೆಲುಗು ಆವೃತ್ತಿಯಲ್ಲಿ ಸಂಪೂರ್ಣವಾಗಿ ತಲುಪದಿರುವುದು ಹಿನ್ನಡೆಯ ಕಾರಣ ಎನ್ನಲಾಗಿದೆ. ಆದಾಗ್ಯೂ, ಆಗಸ್ಟ್ 8ರಂದು ಬಿಡುಗಡೆಯಾದ ಶುಕ್ರವಾರದಂದು ತೆಲುಗು ಮತ್ತು ಮಲಯಾಳಂ ಸೇರಿದಂತೆ ಒಟ್ಟು 3 ಕೋಟಿ ರೂಪಾಯಿಗೂ ಅಧಿಕ ಗಳಿಕೆ ದಾಖಲಿಸಲಾಗಿದೆ.
ಭಾರತದಲ್ಲಿ ಚಿತ್ರ 56 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದ್ದು, ವಿದೇಶಗಳಿಂದ 4.4 ಕೋಟಿ ರೂಪಾಯಿ ಹರಿದು ಬಂದಿದೆ. ಮಲಯಾಳಂ ಆವೃತ್ತಿ ನಿರಂತರವಾಗಿ ಉತ್ತಮ ಪ್ರತಿಕ್ರಿಯೆ ಪಡೆದು, ದಿನಕ್ಕೆ 40 ಲಕ್ಷ ರೂಪಾಯಿಯಷ್ಟು ಗಳಿಕೆ ಸಾಧಿಸುತ್ತಿದೆ. ಇದರಿಂದ ಒಟ್ಟು ಮಲಯಾಳಂ ಕಲೆಕ್ಷನ್ 2.15 ಕೋಟಿ ರೂಪಾಯಿಗೆ ತಲುಪಿದೆ. ಮುಂದಿನ ದಿನಗಳಲ್ಲಿ ತೆಲುಗು ಮಾರುಕಟ್ಟೆಯಲ್ಲಿ ಕಲೆಕ್ಷನ್ ಹೆಚ್ಚಿದರೆ, ಚಿತ್ರದ ಒಟ್ಟು ಗಳಿಕೆಗೆ ಮತ್ತಷ್ಟು ಬಲ ದೊರಕಲಿದೆ.