April 4, 2026
Saturday, April 4, 2026
spot_img

CINE | ನಿರೀಕ್ಷೆ ಹುಸಿಯಾಗಿಸಿದ ‘ದಿ ಕೇರಳ ಸ್ಟೋರಿ’ ಸೀಕ್ವೆಲ್: 9 ದಿನಗಳಲ್ಲಿ ಗಳಿಸಿದ್ದೆಷ್ಟು?

ಹೊಸದಿಗಂತ ಡಿಜಿಟಲ್ ಡೆಸ್ಕ್:

2023ರಲ್ಲಿ ತೆರೆಕಂಡು ದೇಶಾದ್ಯಂತ ದೊಡ್ಡ ಮಟ್ಟದ ಸಂಚಲನ ಮೂಡಿಸಿದ್ದ ‘ದಿ ಕೇರಳ ಸ್ಟೋರಿ’ ಸಿನಿಮಾದ ಮುಂದುವರಿದ ಭಾಗ ‘ದಿ ಕೇರಳ ಸ್ಟೋರಿ 2’ ಫೆಬ್ರವರಿ 27ರಂದು ಬಿಡುಗಡೆಯಾಯಿತು. ಚಿತ್ರದ ಟ್ರೇಲರ್ ಹಂತದಿಂದಲೇ ವಿವಾದಗಳು ಸೃಷ್ಟಿಯಾಗಿದ್ದವು, ಅಲ್ಲದೆ ಸಿನಿಮಾ ಬಿಡುಗಡೆಯ ವಿರುದ್ಧ ಹಲವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಎಲ್ಲಾ ಬೆಳವಣಿಗೆಗಳಿಂದಾಗಿ ಸಿನಿಮಾ ದೊಡ್ಡ ಕಲೆಕ್ಷನ್ ಮಾಡಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಸದ್ಯದ ಬಾಕ್ಸ್ ಆಫೀಸ್ ಲೆಕ್ಕಾಚಾರ ಬೇರೆಯದೇ ಕಥೆ ಹೇಳುತ್ತಿದೆ.

ಬಿಡುಗಡೆಯಾಗಿ 9 ದಿನಗಳು ಕಳೆದಿದ್ದರೂ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಮಾಡುವಲ್ಲಿ ವಿಫಲವಾಗಿದೆ. ಮೊದಲ ದಿನ ಕೆಲವೇ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದ್ದರಿಂದ ಕೇವಲ 75 ಲಕ್ಷ ರೂಪಾಯಿ ಗಳಿಸಿತ್ತು. ಆನಂತರ ಶನಿವಾರ ಮತ್ತು ಭಾನುವಾರ ಕ್ರಮವಾಗಿ 4.65 ಕೋಟಿ ಮತ್ತು 4.74 ಕೋಟಿ ರೂಪಾಯಿ ಆದಾಯ ಬಂದಿತಾದರೂ, ವಾರದ ದಿನಗಳಲ್ಲಿ ಕಲೆಕ್ಷನ್ ಮತ್ತೆ ಕುಸಿಯಿತು.

ಎರಡನೇ ವೀಕೆಂಡ್‌ನಲ್ಲಿ ಸಿನಿಮಾ ಚೇತರಿಸಿಕೊಳ್ಳಬಹುದು ಎಂಬ ಲೆಕ್ಕಾಚಾರವಿತ್ತು. ಆದರೆ ಶನಿವಾರವೂ ಕೇವಲ 3.75 ಕೋಟಿ ರೂಪಾಯಿ ಗಳಿಕೆಯಾಗಿದೆ. ವಿಶೇಷವೆಂದರೆ, ಇಷ್ಟೆಲ್ಲಾ ಚರ್ಚೆ ಮತ್ತು ಪ್ರಚಾರ ಸಿಕ್ಕಿದ್ದರೂ ಸಹ ಚಿತ್ರಕ್ಕೆ ಒಂದು ದಿನವೂ 5 ಕೋಟಿ ರೂಪಾಯಿ ಗಡಿಯನ್ನು ದಾಟಲು ಸಾಧ್ಯವಾಗಿಲ್ಲ.

ಕಾಮ್ಯಾಕ್ಯ ನಾರಾಯಣ್ ಸಿಂಗ್ ನಿರ್ದೇಶನದ ಮತ್ತು ವಿಪುಲ್ ಅಮೃತ್‌ಲಾಲ್ ಶಾ ನಿರ್ಮಾಣದ ಈ ಸಿನಿಮಾ ಇದುವರೆಗೆ ಒಟ್ಟಾರೆಯಾಗಿ 30 ಕೋಟಿ ರೂಪಾಯಿ ಗಳಿಸಿದೆ. ಮುಂದಿನ ದಿನಗಳಲ್ಲಿ ಕಲೆಕ್ಷನ್ ಇನ್ನೂ ಕುಸಿಯುವ ಲಕ್ಷಣಗಳು ಕಂಡುಬರುತ್ತಿದ್ದು, ಮೊದಲ ಭಾಗ ಸೃಷ್ಟಿಸಿದ್ದ ದಾಖಲೆಯನ್ನು ಸೀಕ್ವೆಲ್ ಮುಟ್ಟುವ ಸಾಧ್ಯತೆ ತೀರಾ ಕಡಿಮೆ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !