ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಭಾಸ್ ಅಭಿನಯದ ‘ದಿ ರಾಜಾ ಸಾಬ್’ ಚಿತ್ರದ ಮೇಲೆ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಇತ್ತು. ಮೊದಲ ಬಾರಿಗೆ ನಟ ಹಾರರ್ ಶೈಲಿಗೆ ಕೈ ಹಾಕಿರುವುದು ಸಿನಿಮಾಕ್ಕೆ ಹೆಚ್ಚುವರಿ ಹೈಪ್ ತಂದಿತ್ತು. ಆದರೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಬಳಿಕ ಆ ನಿರೀಕ್ಷೆ ಸಂಪೂರ್ಣವಾಗಿ ನೆರವೇರಿಲ್ಲ ಎಂಬುದನ್ನು ಬಾಕ್ಸ್ ಆಫೀಸ್ ಅಂಕಿ-ಅಂಶಗಳು ಸೂಚಿಸುತ್ತಿವೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭಾರೀ ಅಭಿಮಾನಿ ಬಳಗ ಹೊಂದಿರುವ ಪ್ರಭಾಸ್ ಸಿನಿಮಾಗಳು ಎಂದಿನಂತೆ ಭರ್ಜರಿ ಓಪನಿಂಗ್ ಪಡೆದುಕೊಂಡವು. ‘ದಿ ರಾಜಾ ಸಾಬ್’ ಕೂಡ ಪ್ರೀಮಿಯರ್ ಶೋ ಹಾಗೂ ಮೊದಲ ದಿನದ ಪ್ರದರ್ಶನಗಳಲ್ಲಿ ಉತ್ತಮ ಸ್ಪಂದನೆ ಕಂಡಿತು. ಆದರೆ ಮಿಶ್ರ ಪ್ರತಿಕ್ರಿಯೆ ಹಿನ್ನೆಲೆಯಲ್ಲಿ ಎರಡನೇ ದಿನವೇ ಪ್ರೇಕ್ಷಕರ ಸಂಖ್ಯೆ ಗಮನಾರ್ಹವಾಗಿ ಇಳಿಕೆಯಾಗಿದೆ.
ಇದನ್ನೂ ಓದಿ: FOOD | ಫಟಾಫಟ್ ಅಂತ ರೆಡಿ ಆಗುತ್ತೆ ಯಮ್ಮಿ.. ಕೆಟೊ ಮಗ್ ಕೇಕ್!
ವರದಿಗಳ ಪ್ರಕಾರ, ಪ್ರೀಮಿಯರ್ ಶೋಗಳಿಂದ ಚಿತ್ರಕ್ಕೆ ಸುಮಾರು 9.15 ಕೋಟಿ ರೂಪಾಯಿ ಗಳಿಕೆಯಾಗಿದೆ. ಮೊದಲ ದಿನ 53.75 ಕೋಟಿ ರೂಪಾಯಿ ಸಂಗ್ರಹಿಸಿದ ಸಿನಿಮಾ, ಎರಡನೇ ದಿನಕ್ಕೆ ಬಂದು ಕೇವಲ 27.73 ಕೋಟಿ ರೂಪಾಯಿ ಗಳಿಸಿದೆ. ಇದರಿಂದ ಮೊದಲ ದಿನಕ್ಕೆ ಹೋಲಿಸಿದರೆ ಸುಮಾರು 50 ಶೇಕಡಾ ಕುಸಿತ ಕಂಡಿದೆ. ಪ್ರೀಮಿಯರ್ ಹಾಗೂ ಎರಡು ದಿನಗಳ ಒಟ್ಟು ಗಳಿಕೆ 90.63 ಕೋಟಿ ರೂಪಾಯಿಗೆ ತಲುಪಿದೆ ಎಂದು ಅಂದಾಜಿಸಲಾಗಿದೆ.
ಸುಮಾರು 400 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರದ ಗಳಿಕೆ ನಿರೀಕ್ಷಿತ ಮಟ್ಟ ತಲುಪಿಲ್ಲ. ಜೊತೆಗೆ ಜನವರಿ 12ರಂದು ಚಿರಂಜೀವಿ ನಟನೆಯ ಹೊಸ ಸಿನಿಮಾ ಬಿಡುಗಡೆಯಾಗಲಿರುವುದರಿಂದ, ‘ದಿ ರಾಜಾ ಸಾಬ್’ಗೆ ಚಿತ್ರಮಂದಿರಗಳ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ. ಇದರಿಂದ ಮುಂದಿನ ದಿನಗಳಲ್ಲಿ ಚಿತ್ರದ ಬಾಕ್ಸ್ ಆಫೀಸ್ ಪ್ರದರ್ಶನ ಇನ್ನಷ್ಟು ಕುಸಿಯುವ ಅಂದಾಜು ವ್ಯಕ್ತವಾಗಿದೆ.

