ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಮಾತೃಭೂಮಿ’ ಮತ್ತೆ ಸುದ್ದಿಯ ಕೇಂದ್ರಬಿಂದುವಾಗಿದೆ. ಬಿಡುಗಡೆಗೆ ಸಜ್ಜಾಗಿದ್ದ ಈ ಸಿನಿಮಾಗೆ ಇದೀಗ ಹೊಸ ಅಡೆತಡೆ ಎದುರಾಗಿದ್ದು, ಕಥೆಯ ಪ್ರಮುಖ ಭಾಗವನ್ನು ಬದಲಾಯಿಸಿರುವುದರಿಂದ ಬಿಡುಗಡೆಯ ದಿನಾಂಕದ ಬಗ್ಗೆ ಮತ್ತೆ ಅನುಮಾನಗಳು ಮೂಡಿವೆ.
ಮೊದಲಿಗೆ ‘ಬ್ಯಾಟಲ್ ಆಫ್ ಗಲ್ವಾನ್’ ಎಂಬ ಶೀರ್ಷಿಕೆಯಲ್ಲಿ ಘೋಷಿಸಲ್ಪಟ್ಟಿದ್ದ ಈ ಚಿತ್ರ, 2020ರ ಭಾರತ-ಚೀನಾ ಗಲ್ವಾನ್ ಘರ್ಷಣೆಯಿಂದ ಪ್ರೇರಿತವಾಗಿತ್ತು. ಆದರೆ ನಂತರ ಚಿತ್ರದ ಶೀರ್ಷಿಕೆಯನ್ನು ‘ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್’ ಎಂದು ಬದಲಾಯಿಸಲಾಯಿತು.
ಇದನ್ನೂ ಓದಿ:
ಇತ್ತೀಚಿನ ವರದಿಗಳ ಪ್ರಕಾರ, ರಕ್ಷಣಾ ಸಚಿವಾಲಯವು ಚಿತ್ರದ ವಿಷಯದ ಬಗ್ಗೆ ಕೆಲವು ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದೆ. ವಿಶೇಷವಾಗಿ ಸಿನಿಮಾದಲ್ಲಿ ಚೀನಾದ ನೇರ ಉಲ್ಲೇಖ ಇರಬಾರದು ಎಂದು ಸೂಚಿಸಿರುವ ಹಿನ್ನೆಲೆಯಲ್ಲಿ, ನಿರ್ದೇಶಕ ಅಪೂರ್ವ ಲಖಿಯಾ ಮತ್ತು ಚಿತ್ರತಂಡ ಕಥೆಯಲ್ಲಿ ದೊಡ್ಡ ಮಟ್ಟದ ಬದಲಾವಣೆಗಳನ್ನು ಮಾಡಿದೆ. ಇದರ ಪರಿಣಾಮವಾಗಿ ಸುಮಾರು ಶೇ.40ರಷ್ಟು ಭಾಗವನ್ನು ಮರುಚಿತ್ರೀಕರಿಸಲಾಗಿದೆ ಎನ್ನಲಾಗಿದೆ.
ಹೊಸ ಆವೃತ್ತಿಯಲ್ಲಿ ಕಥೆಗೆ ಕಾಲ್ಪನಿಕ ಸ್ಪರ್ಶ ನೀಡಲಾಗಿದ್ದು, ಕೆಲವು ರೊಮ್ಯಾಂಟಿಕ್ ದೃಶ್ಯಗಳು ಹಾಗೂ ಹಿನ್ನೆಲೆ ಕಥೆಯನ್ನು ಸೇರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮೇ 15ರಂದು ಬಿಡುಗಡೆಯಾಗಬೇಕಿದ್ದ ಈ ಚಿತ್ರದ ರಿಲೀಸ್ ಈಗ ಮುಂದೂಡಿಕೆ ಆಗುವ ಸಾಧ್ಯತೆ ಹೆಚ್ಚಿದೆ. ಹೊಸ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಇನ್ನಷ್ಟೇ ಘೋಷಿಸಬೇಕಿದೆ.



