ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿಯಲ್ಲಿ ಖಾಕಿ ವೇಷಧಾರಿಗಳ ತಂಡವೊಂದು ಹಾಡಹಗಲೇ ನಡುಕ ಹುಟ್ಟಿಸಿದೆ. ಸಬ್ ಇನ್ಸ್‌ಪೆಕ್ಟರ್ ಸೋಗಿನಲ್ಲಿ ಬಂದ ದರೋಡೆಕೋರರು ಮನೆಯವರನ್ನು ಕಟ್ಟಿಹಾಕಿ ಲಕ್ಷಾಂತರ ರೂಪಾಯಿ ಮೌಲ್ಯದ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸೋಮವಾರ ಮಧ್ಯಾಹ್ನ ಬಿಇಎಲ್ ಬಡಾವಣೆಯ ಹೊಂಬಾಳೆಗೌಡ ಎಂಬುವವರ ಮನೆಗೆ ಖಾಸಗಿ ಕಾರಿನಲ್ಲಿ ಇಬ್ಬರು ವ್ಯಕ್ತಿಗಳು ಆಗಮಿಸಿದ್ದರು. ಒಬ್ಬ ಸಬ್ ಇನ್ಸ್‌ಪೆಕ್ಟರ್ ಯೂನಿಫಾರ್ಮ್ ಧರಿಸಿ ಕೈಯಲ್ಲಿ ಡೈರಿ ಹಿಡಿದಿದ್ದರೆ, ಮತ್ತೊಬ್ಬ ಕ್ರೈಮ್ ಪೇದೆಯಂತೆ ಕಾಣುತ್ತಿದ್ದನು. “ನಾವು ಯಲಹಂಕ ಪೊಲೀಸರು” ಎಂದು ಹೇಳಿ ಮನೆಗೆ ಎಂಟ್ರಿ ಕೊಟ್ಟ ಈ ವೇಷಧಾರಿಗಳು, ಒಳಬರುತ್ತಿದ್ದಂತೆ ಅಸಲಿ ರೂಪ ತೋರಿಸಿದ್ದಾರೆ.
ಮನೆಯಲ್ಲಿದ್ದ ಹೊಂಬಾಳೆಗೌಡ (53), ಅವರ ಪತ್ನಿ ಮಂಗಳಮ್ಮ ಮತ್ತು ಮೊಮ್ಮಗನನ್ನು ಗನ್ ಹಾಗೂ ಚಾಕು ತೋರಿಸಿ ಬೆದರಿಸಿದ ದರೋಡೆಕೋರರು, ದಂಪತಿಗಳನ್ನು ಟೇಪ್‌ನಿಂದ ಕಟ್ಟಿಹಾಕಿದ್ದಾರೆ. ಇಡೀ ಬೆಡ್‌ರೂಮ್ ಜಾಲಾಡಿದ ಕಿರಾತಕರು 20 ಲಕ್ಷ ರೂ. ನಗದು ಹಾಗೂ ಸುಮಾರು ಅರ್ಧ ಕೆಜಿ ಚಿನ್ನಾಭರಣಗಳನ್ನು ಲೂಟಿ ಮಾಡಿದ್ದಾರೆ.
ದರೋಡೆ ವೇಳೆ ಭಯಭೀತರಾದ ಮಂಗಳಮ್ಮ ಅವರು ತಮ್ಮ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರವನ್ನೂ ನೀಡಲು ಮುಂದಾದಾಗ, “ಇದು ಬೇಡ” ಎಂದು ಬಿಟ್ಟುಹೋಗುವ ಮೂಲಕ ದರೋಡೆಕೋರರು ವಿಚಿತ್ರ ನಡವಳಿಕೆ ತೋರಿದ್ದಾರೆ. ಆದರೆ ಹೋಗುವಾಗ ಸಾಕ್ಷ್ಯ ನಾಶಪಡಿಸಲು ಮನೆಯಲ್ಲಿದ್ದ ಸಿಸಿಟಿವಿ ಡಿವಿಆರ್ ಮತ್ತು ದಂಪತಿಗಳ ಮೊಬೈಲ್ ಫೋನ್‌ಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಪಶ್ಚಿಮ ವಿಭಾಗದ ಡಿಸಿಪಿ ನಾಗೇಶ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಖಾಕಿ ವೇಷದಲ್ಲಿ ದರೋಡೆ ಮಾಡಿದ ಕಿಲಾಡಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.



