Wednesday, December 10, 2025

ಇಂಡಿಗೋ| ಬೆಂಗಳೂರು ಏರ್​​ಪೋರ್ಟ್​​ಗೆ ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಗಳ ಭೇಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಳೆದ ಕೆಲ ದಿನಗಳಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರಾಟ ನಡೆಸಬೇಕಿದ್ದ ಇಂಡಿಗೋ ವಿಮಾನಗಳಲ್ಲಿ ಬಹಳ ವ್ಯತ್ಯಯವಾಗುತ್ತಿದೆ. ಸರಿ ಸುಮಾರು ಒಂದು ವಾರಗಳ ಕಾಲ ವಿಮಾನಗಳ ಸಂಚಾರದಲ್ಲಾದ ತೊಡಕಿನಿಂದ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ವಿವಿಧ ನಗರಗಳಿಗೆ ತೆರಳಲು ಮುಂಚಿತವಾಗಿಯೇ ಟಿಕೆಟ್​​ ಕಾಯ್ದಿರಿಸಿದ್ದರೂ ವಿಮಾನಗಳು ಹಾರಾಟ ನಡೆಸದ ಕಾರಣ ಅಥವಾ ವಿಳಂಬವಾಗದ ಕಾರಣ ಬಹಳ ಆಕ್ರೋಶ ವ್ಯಕ್ತವಾಗುತ್ತಿದೆ. ಆ ಬೆನ್ನಲ್ಲೇ ಬೆಂಗಳೂರು ಏರ್​​ಪೋರ್ಟ್​​ಗೆ ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ವಿಮಾನಯಾನ ಸಚಿವಾಲಯದ ನಿರ್ದೇಶಕ ಸಂಕೇಶ್ ಮೆಹ್ತಾ ನೇತೃತ್ವದ ಅಧಿಕಾರಿಗಳ ತಂಡ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಏರ್​ಪೋರ್ಟ್​​ಗೆ ಭೇಟಿ ನೀಡಿದ್ದು, ಕೈಗೊಂಡ ಕ್ರಮಗಳ ಜೊತೆಗೆ ಸಮಸ್ಯೆಗಳ ಪರಿಶೀಲನೆ ನಡೆಸಿದೆ. ಈ ಬಗ್ಗೆ ಟರ್ಮಿನಲ್ 1ರಲ್ಲಿ ಆಡಳಿತ ಮಂಡಳಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದೆ.

ಆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿರುವ ಸಂಕೇಶ್ ಮೆಹ್ತಾ, ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ. ಲಗೇಜ್ ಸೇರಿದಂತೆ ಎಲ್ಲಾ ಸಮಸ್ಯೆಗಳು ಹಂತ ಹಂತವಾಗಿ ಸರಿ ಹೋಗುತ್ತಿವೆ. ಈಗಾಗಲೇ ವಿಮಾನಯಾನ ಸಚಿವಾಲಯದಿಂದ ಏರ್ಲೈನ್ಸ್ ಗೆ ಸೂಚನೆ ನೀಡಲಾಗಿದ್ದು, ವಿಮಾನಯಾನ ಸಚಿವರೇ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರು ಏರ್ಪೋರ್ಟ್ ‌ದೇಶದಲ್ಲೇ ಅತಿ ಹೆಚ್ಚು ಪ್ರಯಾಣಿಕರು ಬರುವ ಸ್ಥಳ. ಹೀಗಾಗಿ ಏರ್​​ಪೋರ್ಟ್​​ಗೆ ಭೇಟಿ ನೀಡಿ‌ ಕೆಐಎಬಿ ಹಾಗೂ ಇಂಡಿಗೋ ಏರ್​​ಲೈನ್ಸ್​​ ಅಧಿಕಾರಿಗಳ ಜೊತೆ ಚರ್ಚೆ ನಡೆಸಿರೋದಾಗಿ ಅವರು ತಿಳಿಸಿದ್ದಾರೆ.

error: Content is protected !!