Sunday, December 21, 2025

ಕ್ಲಾಸ್ ಶಾಶ್ವತ, ಫಾರ್ಮ್ ತಾತ್ಕಾಲಿಕ: ಗಿಲ್‌ ಬಗ್ಗೆ ಸುನಿಲ್ ಗವಾಸ್ಕರ್ ಹೀಗ್ಯಾಕಂದ್ರು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ20 ವಿಶ್ವಕಪ್‌ಗಾಗಿ ಭಾರತ ತಂಡವನ್ನು ಪ್ರಕಟಿಸಿರುವ ಬೆನ್ನಲ್ಲೇ ಕ್ರಿಕೆಟ್ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. 15 ಸದಸ್ಯರ ತಂಡದಲ್ಲಿ ಶುಭ್‌ಮನ್ ಗಿಲ್‌ಗೆ ಅವಕಾಶ ಸಿಗದಿರುವುದು ಅಭಿಮಾನಿಗಳನ್ನು ಅಚ್ಚರಿಗೊಳಿಸಿದೆ. ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾರತ ಟಿ20 ತಂಡದ ಉಪನಾಯಕರಾಗಿದ್ದ ಗಿಲ್, ವಿಶ್ವಕಪ್ ತಂಡದಲ್ಲೂ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ ನ್ಯೂಜಿಲೆಂಡ್ ಸರಣಿ ಹಾಗೂ ವಿಶ್ವಕಪ್ ಎರಡಕ್ಕೂ ಆಯ್ಕೆ ಸಮಿತಿ ಅವರನ್ನು ಕೈಬಿಟ್ಟಿದೆ.

ಈ ನಿರ್ಧಾರ ಕುರಿತು ಮಾತನಾಡಿರುವ ಟೀಮ್ ಇಂಡಿಯಾದ ಮಾಜಿ ನಾಯಕ ಸುನಿಲ್ ಗವಾಸ್ಕರ್, ಗಿಲ್‌ರನ್ನು ಬಿಟ್ಟುಬಿಟ್ಟಿರುವುದು ಅಚ್ಚರಿಯ ಸಂಗತಿ ಎಂದು ಹೇಳಿದ್ದಾರೆ. “ಗಿಲ್ ಒಬ್ಬ ಶ್ರೇಷ್ಠ ಬ್ಯಾಟ್ಸ್‌ಮನ್. 2024ರ ಟಿ20 ವಿಶ್ವಕಪ್ ಬಳಿಕ ಉತ್ತಮ ಪ್ರದರ್ಶನ ನೀಡಿದ್ದಾರೆ. ಫಾರ್ಮ್ ತಾತ್ಕಾಲಿಕವಾದದ್ದು, ಆದರೆ ಕ್ಲಾಸ್ ಶಾಶ್ವತ” ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜೊತೆಗೆ ಇತ್ತೀಚೆಗೆ ವಿಮಾನ ಪ್ರಯಾಣದ ವೇಳೆ ಗಿಲ್‌ ಭೇಟಿ ಆಗಿದ್ದು, ಕೆಟ್ಟ ದೃಷ್ಟಿ ತೆಗೆಯಲು ಹಿರಿಯರಿಂದ ಆಶೀರ್ವಾದ ಪಡೆಯುವಂತೆ ಸಲಹೆ ನೀಡಿದ್ದನ್ನೂ ಗವಾಸ್ಕರ್ ಹೇಳಿಕೊಂಡಿದ್ದಾರೆ.

ಆದರೆ ಆಯ್ಕೆ ಸಮಿತಿಯ ನಿರ್ಧಾರಕ್ಕೆ ಪ್ರಮುಖ ಕಾರಣ ಗಿಲ್‌ರ ಇತ್ತೀಚಿನ ಕಳಪೆ ಪ್ರದರ್ಶನವೇ ಎಂದು ತಿಳಿದುಬಂದಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳಲ್ಲಿ ಆರಂಭಿಕನಾಗಿ ಆಡಿದ ಗಿಲ್ ಕೇವಲ 32 ರನ್‌ಗಳನ್ನು ಮಾತ್ರ ಕಲೆಹಾಕಿದ್ದರು. ಈ ಹಿನ್ನೆಲೆ, ತಂಡದಲ್ಲಿ ಸಮತೋಲನ ಕಾಯ್ದುಕೊಳ್ಳಲು ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್‌ಗೆ ಅವಕಾಶ ನೀಡಲಾಗಿದೆ.

error: Content is protected !!