ಮನೆ ಅಥವಾ ಕಚೇರಿಯ ಅಂದವನ್ನು ಹೆಚ್ಚಿಸುವ ಸೋಫಾಗಳು ದಿನನಿತ್ಯದ ಬಳಕೆಯಿಂದ ಬೇಗನೇ ಮಸುಕಾಗುತ್ತವೆ. ಧೂಳು, ಕೂದಲು, ಆಹಾರದ ಕಲೆಗಳಿಂದ ಸೋಫಾ ಕವರ್‌ಗಳು ಕಳೆಗುಂದುವುದು ಸಾಮಾನ್ಯ. ಆದರೆ ಎಲ್ಲ ಸೋಫಾ ಕವರ್‌ಗಳನ್ನೂ ತೆಗೆದು ತೊಳೆಯುವುದು ಸಾಧ್ಯವಿಲ್ಲ. ಇಂತಹ ಸಂದರ್ಭಗಳಲ್ಲಿ ತೊಳೆಯದೇ ಸ್ವಚ್ಛಗೊಳಿಸುವ ಸರಳ ವಿಧಾನಗಳನ್ನು ತಿಳಿದುಕೊಳ್ಳುವುದು ಉಪಯುಕ್ತ.
- ಬಟ್ಟೆಯ ಸ್ವಭಾವ ತಿಳಿದುಕೊಳ್ಳಿ: ಸ್ವಚ್ಛಗೊಳಿಸುವ ಮೊದಲು ಸೋಫಾ ಯಾವ ಬಟ್ಟೆಯಿಂದ ತಯಾರಿಸಲಾಗಿದೆ ಎಂಬುದನ್ನು ಪರಿಶೀಲಿಸಿ. ಕವರ್‌ನ ಲೇಬಲ್ ನೋಡಿದರೆ ಯಾವ ರೀತಿಯ ಕ್ಲೀನಿಂಗ್ ಸುರಕ್ಷಿತ ಎಂಬುದು ತಿಳಿಯುತ್ತದೆ.
- ಕಲೆ ಕಂಡ ತಕ್ಷಣ ಉಜ್ಜಬೇಡಿ: ಕಲೆ ಬಿದ್ದ ಕೂಡಲೇ ಒಣ ಬಟ್ಟೆ ಅಥವಾ ಪೇಪರ್ ಟವಲ್‌ನಿಂದ ನಿಧಾನವಾಗಿ ಒರೆಸಿ. ಜೋರಾಗಿ ಉಜ್ಜಿದರೆ ಕಲೆ ಬಟ್ಟೆಯೊಳಗೆ ಆಳವಾಗಿ ಹರಡುತ್ತದೆ.
- ಕ್ಲೀನರ್ ಬಳಕೆಗೆ ಮುನ್ನ ಪರೀಕ್ಷೆ: ಯಾವುದೇ ಕ್ಲೀನಿಂಗ್ ದ್ರಾವಣವನ್ನು ನೇರವಾಗಿ ಬಳಸುವ ಮುನ್ನ, ಸೋಫಾದ ಒಂದು ಚಿಕ್ಕ ಭಾಗದಲ್ಲಿ ಪರೀಕ್ಷಿಸಿ ಬಣ್ಣ ಅಥವಾ ಬಟ್ಟೆಗೆ ಹಾನಿಯಾಗುವುದಿಲ್ಲವೆಂದು ಖಚಿತಪಡಿಸಿಕೊಳ್ಳಿ.
- ಮನೆಯ ಸಾಮಗ್ರಿಗಳಿಂದ ಕಲೆ ತೆಗೆಯುವುದು: ಚಹಾ–ಕಾಫಿ ತರಹದ ನೀರು ಆಧಾರಿತ ಕಲೆಗಳಿಗೆ ಬೆಚ್ಚಗಿನ ನೀರು ಮತ್ತು ಸ್ವಲ್ಪ ಡಿಶ್ ಸೋಪ್ ಸಾಕು. ಎಣ್ಣೆ ಕಲೆಗಳಿಗೆ ಕಾರ್ನ್‌ಸ್ಟಾರ್ಚ್ ಅಥವಾ ಟಾಲ್ಕಮ್ ಪೌಡರ್ ಹಚ್ಚಿ 20 ನಿಮಿಷ ಬಿಡಿ, ನಂತರ ಮೃದುವಾದ ಬ್ರಷ್‌ನಿಂದ ತೆಗೆಯಿರಿ. ಗಟ್ಟಿ ಗ್ರೀಸ್ ಕಲೆಗಳಿಗೆ ಹತ್ತಿ ಉಂಡೆಯಲ್ಲಿ ಸ್ವಲ್ಪ ಆಲ್ಕೋಹಾಲ್ ಬಳಸಿ.
- ಅಡುಗೆ ಸೋಡಾ ಮತ್ತು ವಾಸನೆ ನಿವಾರಣೆ: ಅಡುಗೆ ಸೋಡಾವನ್ನು ಸಣ್ಣ ಪ್ರಮಾಣದಲ್ಲಿ ಕಲೆ ಮೇಲೆ ಸಿಂಪಡಿಸಿ ಅರ್ಧ ಗಂಟೆ ಬಿಡಿ. ನಂತರ ಬ್ರಷ್ ನಿಂದ ಉಜ್ಜಿದರೆ ಕಲೆ ಸುಲಭವಾಗಿ ಹೋಗುತ್ತದೆ. ಸಾಕುಪ್ರಾಣಿಗಳ ವಾಸನೆಗೆ ಅಡುಗೆ ಸೋಡಾ ಹಾಗೂ ಲ್ಯಾವೆಂಡರ್ ಎಣ್ಣೆ ಮಿಶ್ರಣ ಉತ್ತಮ ಪರಿಹಾರ.
ಕಲೆ ತೆಗೆದ ನಂತರ ಒದ್ದೆಯಾದ ಬಟ್ಟೆಯಿಂದ ಸ್ಥಳವನ್ನು ಒರೆಸಿ, ಒಣಗಲು ಬಿಡಿ. ಹೆಚ್ಚು ನೀರು ಬಳಸದಿರುವುದು ಮುಖ್ಯ. ಈ ಸರಳ ಕ್ರಮಗಳನ್ನು ಅನುಸರಿಸಿದರೆ, ಸೋಫಾ ಕವರ್‌ಗಳು ತೊಳೆಯದೇ ಹೊಸತರಂತೆ ಕಾಣುತ್ತವೆ.

