ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡ ರಾಜ್ಯದ ಉತ್ತರಕಾಶಿಯ ಧರಾಲಿ ಗ್ರಾಮದಲ್ಲಿ ಮೇಘಸ್ಫೋಟ ಉಂಟಾಗಿದ್ದ ಗ್ರಾಮ ಸಂಪೂರ್ಣವಾಗಿ ಕೊಚ್ಚಿಹೋಗಿದೆ. ಜನರು ಪ್ರಾಣ ಉಳಿಸಿಕೊಳ್ಳಲು ಓಡುತ್ತಿರುವ ದೃಶ್ಯಗಳು ಮನಕಲಕುವಂತಿದೆ. ಈ ದಿಢೀರ್ ಪ್ರವಾಹದಿಂದ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ೧೦೦ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ.
ಧರಾಲಿಯಿಂದ ಸುಮಾರು 4 ಕಿಮೀ ದೂರದಲ್ಲಿರುವ ಹರ್ಸಿಲ್‌ನ ಸೇನಾ ಶಿಬಿರದಿಂದ ಐಬೆಕ್ಸ್ ಬ್ರಿಗೇಡ್‌ನ ಸೈನಿಕರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಈವರೆಗೆ 15-20 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಯ ಮೂರು ತಂಡಗಳು (ಮನೇರಾ, ಬಟ್ಕೋಟ್, ಮತ್ತು ಡೆಹ್ರಾಡೂನ್‌ನಿಂದ) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಯ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. 16 ಸದಸ್ಯರ ಇಂಡೋ-ಟಿಬೆಟನ್ ಬಾರ್ಡರ್ ಪೊಲೀಸ್ (ITBP) ತಂಡವು ರಕ್ಷಣಾ ಕಾರ್ಯಕ್ಕೆ ಧರಾಲಿಯಲ್ಲಿ ತೊಡಗಿದ್ದಾರೆ ಮತ್ತು ಮತ್ತೊಂದು ತಂಡವನ್ನು ಮಾಟ್ಲಿಯಿಂದ ಕಳುಹಿಸಲಾಗಿದೆ. ಜೊತೆಗೆ ಸ್ಥಳೀಯ ಜಿಲ್ಲಾಡಳಿತ, ಪೊಲೀಸ್ ಮತ್ತು ಇತರ ತುರ್ತು ಸೇವಾ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಕರಿಸುತ್ತಿವೆ.
ಮೋದಿ, ಅಮಿತ್ ಶಾ ಭರವಸೆ
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿಯೊಂದಿಗೆ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸರ್ಕಾರದಿಂದ ಸಂಪೂರ್ಣ ಸಹಾಯವನ್ನು ಒದಗಿಸುವ ಭರವಸೆ ನೀಡಿದ್ದಾರೆ. ‘ಧರಾಲಿಯ ದುರಂತದಿಂದ ಬಾಧಿತರಾದವರಿಗೆ ನನ್ನ ಸಂತಾಪ. ರಾಜ್ಯ ಸರ್ಕಾರದ ಮೇಲ್ವಿಚಾರಣೆಯಲ್ಲಿ ರಕ್ಷಣಾ ತಂಡಗಳು ಎಲ್ಲ ಸಾಧ್ಯತೆಗಳನ್ನು ಬಳಸಿಕೊಂಡು ಕಾರ್ಯನಿರ್ವಹಿಸುತ್ತಿವೆ’ ಎಂದು ಅವರು X ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕೇಂದ್ರ ಸಚಿವ ಅಮಿತ್ ಶಾ, ಮುಖ್ಯಮಂತ್ರಿಯೊಂದಿಗೆ ಮಾತನಾಡಿ, ತಕ್ಷಣವೇ ITBP ಮತ್ತು NDRF ತಂಡಗಳನ್ನು ಕಳುಹಿಸಲಾಗಿದೆ ಎಂದು ದೃಢಪಡಿಸಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ “ಉತ್ತರಕಾಶಿಯಲ್ಲಿ (ಉತ್ತರಾಖಂಡ) ಉಂಟಾದ ದಿಢೀರ್ ಪ್ರವಾಹದಿಂದ ಉಂಟಾದ ವಿನಾಶದ ದೃಶ್ಯಗಳನ್ನು ನೋಡುತ್ತಿದ್ದೇನೆ. ದುರಂತದಿಂದ ಹಾನಿಗೊಳಗಾದ ಜನರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತಿದ್ದೇನೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ, ಅಮೂಲ್ಯ ಜೀವಗಳನ್ನು ಉಳಿಸಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ” ಎಂದು ಪೋಸ್ಟ್ ಮಾಡಿದ್ದಾರೆ.