Friday, October 31, 2025

ಸಿಎಂ ಬದಲಾವಣೆ ಗಾಸಿಪ್: ಪ್ರಶ್ನೆ ಕೇಳಿದ ಪತ್ರಕರ್ತನ ಮೇಲೆ ಸಿದ್ದರಾಮಯ್ಯ ಸಿಡಿಮಿಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನವೆಂಬರ್ 21 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಸುದ್ದಿ ಕುರಿತು ಕೇಳಲಾದ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರವಾಗಿ ಕೆರಳಿದ ಘಟನೆ ಇಂದು ನಡೆದಿದೆ.

ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಕ್ಕೆ ಆಗಿರುವ ಅನ್ಯಾಯದ ಕುರಿತು ನಡೆದ ಮಹತ್ವದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದಾಗ ಸಿಎಂಗೆ ಈ ಪ್ರಶ್ನೆ ಎದುರಾಯಿತು. ಪ್ರಶ್ನೆ ಕೇಳಿದ ಕೂಡಲೇ ಸಿಎಂ ಸಿದ್ದರಾಮಯ್ಯ ಗರಂ ಆದರು.

“ಯಾರ್ ಹೇಳಿದ್ದು? ನಿನಗೆ ಯಾರ್ ಹೇಳಿದ್ರು? ನಿನಗೆ ಹೆಂಗೆ ಗೊತ್ತಾಯ್ತು? ಯಾವ ಪತ್ರಿಕೆ? ಯಾವ ಪತ್ರಿಕೆ ನೋಡಿದೆ ನೀನು? ನಾನು ಎಲ್ಲಾ ಪತ್ರಿಕೆ ಓದುತ್ತೇನೆ. ಯಾವುದರಲ್ಲೂ ಬಂದಿಲ್ಲ,” ಎಂದು ಸಿಎಂ ಗದರಿಸಿದರು. ವರದಿಗಾರರು ನಿರ್ದಿಷ್ಟ ಪತ್ರಿಕೆಯ ಹೆಸರನ್ನು ಹೇಳಿದಾಗ, ಸಿಎಂ ಸಿದ್ದರಾಮಯ್ಯ ಯಾವುದೇ ಪ್ರತಿಕ್ರಿಯೆ ನೀಡದೆ ಸ್ಥಳದಿಂದ ನಿರ್ಗಮಿಸಿದರು.

ಅಲೆಮಾರಿ ಸಮುದಾಯದ ಬೇಡಿಕೆ ಈಡೇರಿಕೆಗೆ ಸಿಎಂ ಭರವಸೆ
ಈ ಕುರಿತು ಸಭೆಯ ವಿವರ ನೀಡಿದ ಸಿಎಂ ಸಿದ್ದರಾಮಯ್ಯ, “ಅಲೆಮಾರಿಗಳ ಮಹಾ ಒಕ್ಕೂಟದೊಂದಿಗೆ ಸಭೆ ಮಾಡಿದ್ದೇವೆ. ನಾಗಮೋಹನ್ ದಾಸ್ ವರದಿಯಂತೆ ಅವರಿಗೆ 1% ಮೀಸಲಾತಿ ನೀಡಿದರೂ ಅವರನ್ನು ‘ಸಿ’ ಗುಂಪಿಗೆ ಸೇರಿಸಲಾಗಿದೆ. ಹೀಗಾಗಿ, ಪ್ರತ್ಯೇಕ 1% ಮೀಸಲಾತಿ ಮತ್ತು ಅಭಿವೃದ್ಧಿ ನಿಗಮ ಸ್ಥಾಪನೆಗೆ ಅವರು ಒತ್ತಾಯ ಮಾಡಿದ್ದಾರೆ,” ಎಂದು ತಿಳಿಸಿದರು.

“ನಾವು ಸಾಮಾಜಿಕ ನ್ಯಾಯದ ಪರ ಇದ್ದೇವೆ. ಅವರಿಗೆ ಪ್ರತ್ಯೇಕ 1% ಮೀಸಲಾತಿ ನೀಡುವ ಬಗ್ಗೆ ಕಾನೂನು ತಜ್ಞರೊಂದಿಗೆ ಸಭೆ ನಡೆಸಿ ತೀರ್ಮಾನ ಮಾಡುತ್ತೇವೆ. ಅಭಿವೃದ್ಧಿ ನಿಗಮ ಮಾಡುವುದು ಹಾಗೂ ಆರ್ಥಿಕ ಪ್ಯಾಕೇಜ್ ನೀಡುವುದಾಗಿ ಭರವಸೆ ನೀಡಿದ್ದೇವೆ. ಸ್ವಲ್ಪ ಸಮಯ ಕೇಳಿದ್ದೇವೆ. ಜೊತೆಗೆ, ಸಮುದಾಯದವರು ಕೋರ್ಟ್ ಕೇಸ್ ವಾಪಸ್ ಪಡೆಯಬೇಕು ಎಂದು ಮನವಿ ಮಾಡಿದ್ದೇವೆ,” ಎಂದು ಹೇಳಿದರು.

error: Content is protected !!