ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಕಾಂಗ್ರೆಸ್‌ನಲ್ಲಿ ಪವರ್ ಶೇರಿಂಗ್‌ಗೆ ಸಂಬಂಧಿಸಿದ ಗೊಂದಲಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಈ ರಾಜಕೀಯ ಹಗ್ಗಜಗ್ಗಾಟದ ನಡುವೆಯೇ ಪಕ್ಷದ ನಾಯಕರುಗಳ ನಡುವಿನ ‘ಬ್ರೇಕ್‌ಫಾಸ್ಟ್’ ಹಾಗೂ ‘ಲಂಚ್’ ರಾಜಕಾರಣವೂ ಜೋರಾಗಿದೆ. ಈ ಬೆಳವಣಿಗೆಗಳ ಮಧ್ಯೆಯೇ, ಪ್ರಮುಖವಾಗಿ ಕಾಯುತ್ತಿದ್ದ ಒಂದು ನಿರ್ಧಾರ ಹೊರಬಿದ್ದಿದೆ.
ಶನಿವಾರ ಸಿಎಂ-ಡಿಸಿಎಂ ಮಹತ್ವದ ಸಭೆ
ಪಕ್ಷದ ಗೊಂದಲಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಶನಿವಾರದಂದು ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಮಹತ್ವದ ಸಭೆ ನಡೆಸಲು ನಿರ್ಧರಿಸಿದ್ದಾರೆ. ಮುಖ್ಯಮಂತ್ರಿಗಳ ನಿವಾಸ ಕಾವೇರಿಯಲ್ಲಿ ಬೆಳಿಗ್ಗೆ 9:30ಕ್ಕೆ ಈ ‘ಬ್ರೇಕ್‌ಫಾಸ್ಟ್ ಮೀಟಿಂಗ್’ ನಡೆಯಲಿದೆ ಎಂದು ತಿಳಿದುಬಂದಿದೆ.
ಯಾವುದೇ ರೀತಿಯ ಗೊಂದಲಗಳನ್ನು ಇಟ್ಟುಕೊಂಡು ದೆಹಲಿಗೆ ಬರುವ ಮೊದಲು ನೀವಿಬ್ಬರೂ ಪರಸ್ಪರ ಮಾತುಕತೆ ನಡೆಸಿ ಸ್ಪಷ್ಟತೆ ತಂದುಕೊಳ್ಳಿ ಎಂದು ಪಕ್ಷದ ಹೈಕಮಾಂಡ್ ಕಟ್ಟುನಿಟ್ಟಿನ ಸೂಚನೆ ನೀಡಿದ ಬೆನ್ನಲ್ಲೇ ಈ ನಿರ್ಧಾರಕ್ಕೆ ಬರಲಾಗಿದೆ.
ರಾಜ್ಯದಲ್ಲಿ ಉಂಟಾಗಿರುವ ಗೊಂದಲದ ಕುರಿತು ಹಿರಿಯ ನಾಯಕರು ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಇಂದು ಸಚಿವ ಮುನಿಯಪ್ಪ ಅವರೊಂದಿಗೆ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಬ್ರೇಕ್‌ಫಾಸ್ಟ್ ಮೀಟಿಂಗ್ ನಡೆಸಿದರು. ಈ ಸಭೆಯಲ್ಲಿ ಮಾಜಿ ಸಚಿವ ಹೆಚ್. ಆಂಜನೇಯ ಮತ್ತು ಮಾಜಿ ಸಂಸದ ಚಂದ್ರಪ್ಪ ಕೂಡ ಭಾಗವಹಿಸಿದ್ದರು.
ಇದಕ್ಕೆ ಮೊದಲು, ಗುರುವಾರ (ನ 27) ರಂದು ಸಚಿವ ಸತೀಶ್ ಜಾರಕಿಹೊಳಿ ಮತ್ತು ಮಹದೇವಪ್ಪ ಅವರೊಂದಿಗೆ ಬಿ.ಕೆ. ಹರಿಪ್ರಸಾದ್ ಅವರು ಮಾತುಕತೆ ನಡೆಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ಬಿ.ಕೆ. ಹರಿಪ್ರಸಾದ್, ಈ ಭೇಟಿಗಳು ಹಳೆಯ ಸ್ನೇಹಿತರ ಸೌಹಾರ್ದಯುತ ಭೇಟಿ ಎಂದಿದ್ದರೂ, ಪವರ್ ಶೇರಿಂಗ್ ವಿಚಾರದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. “ಈ ಗೊಂದಲದಿಂದ ನಮ್ಮ ಸರ್ಕಾರದ ಜನಪರ ಕಾರ್ಯಕ್ರಮಗಳು ಜನರಿಗೆ ಪರಿಣಾಮಕಾರಿಯಾಗಿ ತಲುಪುತ್ತಿಲ್ಲ. ಆದಷ್ಟು ಬೇಗ ಎಐಸಿಸಿ ಅಧ್ಯಕ್ಷರು ಮತ್ತು ಹೈಕಮಾಂಡ್ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ, ಗೊಂದಲಗಳನ್ನು ಬಗೆಹರಿಸಬೇಕು” ಎಂದು ಅವರು ಮನವಿ ಮಾಡಿದ್ದಾರೆ.

