ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನ ರಸ್ತೆಗುಂಡಿ ಸಮಸ್ಯೆ ಶೀಘ್ರ ಪರಿಹಾರವಾಗಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟ ಸೂಚನೆ ನೀಡಿದ್ದಾರೆ. ಅಕ್ಟೋಬರ್ 31ರೊಳಗೆ ನಗರದಲ್ಲಿರುವ ಎಲ್ಲಾ ರಸ್ತೆಗುಂಡಿಗಳನ್ನು ಮುಚ್ಚುವಂತೆ ಅಧಿಕಾರಿಗಳಿಗೆ ಗಡುವು ನಿಗದಿಪಡಿಸಲಾಗಿದೆ. ಜೊತೆಗೆ ಈ ಕಾರ್ಯಕ್ಕಾಗಿ ಹೆಚ್ಚುವರಿ 750 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡುವ ಭರವಸೆಯನ್ನೂ ಸರ್ಕಾರ ನೀಡಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಸಿಎಂ ನಿವಾಸ ಕಾವೇರಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, “ಬೆಂಗಳೂರು ರಸ್ತೆಗಳನ್ನು ಸುಧಾರಣೆಗೊಳಿಸಲು ಮತ್ತು ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಮುಖ್ಯಮಂತ್ರಿಗಳೊಂದಿಗೆ ನಾವು ಸಭೆ ನಡೆಸಿದ್ದೇವೆ. ಈಗಾಗಲೇ 10 ಸಾವಿರಕ್ಕೂ ಹೆಚ್ಚು ರಸ್ತೆಗುಂಡಿಗಳನ್ನು ಪತ್ತೆ ಹಚ್ಚಲಾಗಿದೆ. ಇವುಗಳನ್ನು ತಕ್ಷಣ ಮುಚ್ಚದಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೇನೆ” ಎಂದು ಹೇಳಿದರು.
ರಸ್ತೆಗುಂಡಿಗಳ ಪಟ್ಟಿ ಸಿದ್ಧಪಡಿಸಲು ಹಾಗೂ ಸಾರ್ವಜನಿಕರಿಂದ ಮಾಹಿತಿ ಪಡೆಯಲು ಪೊಲೀಸರ ಸಹಾಯವನ್ನು ಬಳಸಲಾಗುತ್ತಿದೆ. ಮಳೆಗಾಲ ಮುಗಿದ ಬಳಿಕ ರಸ್ತೆ ನಿರ್ವಹಣೆಗೆ ಶಾಶ್ವತ ಯೋಜನೆ ರೂಪಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ.
“ರಸ್ತೆಗುಂಡಿ ಸಮಸ್ಯೆ ಎಲ್ಲಾ ನಗರಗಳಲ್ಲಿಯೂ ಇದೆ. ಆದರೆ ಬೆಂಗಳೂರು ಮಾತ್ರ ಹೆಚ್ಚು ಸುದ್ದಿಯಾಗುತ್ತಿದೆ. ಇತರ ರಾಜ್ಯಗಳಲ್ಲಿ ಮಾಧ್ಯಮಗಳನ್ನು ನಿಯಂತ್ರಿಸುತ್ತಾರೆ, ನಮ್ಮ ರಾಜ್ಯದಲ್ಲಿ ಹೆಚ್ಚು ಸ್ವಾತಂತ್ರ್ಯವಿರುವುದರಿಂದ ಈ ವಿಷಯ ಹೆಚ್ಚು ಪ್ರಚಾರವಾಗುತ್ತಿದೆ” ಎಂದು ಡಿಕೆ ಶಿವಕುಮಾರ್ ಹೇಳಿದರು.
“ಈ ವಿಷಯದಲ್ಲಿ ಕೆಲವರು ರಾಜಕೀಯ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ನಾವು ಜನರಿಗೆ ಸುಗಮ ಸಂಚಾರ ಒದಗಿಸುವತ್ತ ಗಮನ ಹರಿಸುತ್ತಿದ್ದೇವೆ. ಈಗಾಗಲೇ 7 ಸಾವಿರಕ್ಕೂ ಹೆಚ್ಚು ರಸ್ತೆಗುಂಡಿಗಳನ್ನು ಮುಚ್ಚಲಾಗಿದೆ, ಇನ್ನೂ 5 ಸಾವಿರದಷ್ಟು ಗುಂಡಿಗಳನ್ನು ಶೀಘ್ರ ಮುಚ್ಚುವ ಕಾರ್ಯ ಪ್ರಗತಿಯಲ್ಲಿದೆ” ಎಂದು ಅವರು ತಿಳಿಸಿದರು.