ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿನಿಯರ ಉನ್ನತ ಶಿಕ್ಷಣಕ್ಕೆ ಅನುಕೂಲವಾಗುವಂತೆ ವಾರ್ಷಿಕ 30,000 ರೂ.ಗಳಂತೆ ಒಟ್ಟು 37,000 ವಿದ್ಯಾರ್ಥಿನಿಯರಿಗೆ ‘ದೀಪಿಕಾ ವಿದ್ಯಾರ್ಥಿ ವೇತನ’ ನೀಡುವ ಈ ಯೋಜನೆಯಿಂದ ಬಡ ಹೆಣ್ಣುಮಕ್ಕಳಿಗೆ ಹೆಚ್ಚಿನ ಲಾಭವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರಿನ ಹೆಬ್ಬಾಳದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಸಮಾವೇಶ ಭವನದಲ್ಲಿ ದೀಪಿಕಾ ಉನ್ನತ ಶಿಕ್ಷಣ ವಿದ್ಯಾರ್ಥಿ ವೇತನ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು. “ನಮ್ಮ ರಾಜ್ಯದ ಪ್ರತಿಷ್ಠಿತ ಐಟಿ ದಿಗ್ಗಜರಾದ ಅಜೀಂ ಪ್ರೇಮ್ ಜಿ ಅವರು ಅಜೀಂ ಪ್ರೇಮ್ ಜಿ ಫೌಂಡೇಶನ್ ಮೂಲಕ ಅನೇಕ ಜನಪರ ಕಾರ್ಯಗಳನ್ನು ಕೈಗೊಂಡಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರ ಪೂರೈಸುತ್ತಿದ್ದಾರೆ. ಅಲ್ಲದೇ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ಶಿಕ್ಷಣದಲ್ಲಿ ತೊಡಗುವಂತಾಗುವ ದೃಷ್ಟಿಯಿಂದ ‘ದೀಪಿಕಾ ವಿದ್ಯಾರ್ಥಿ ವೇತನ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ಎಂದರು.
ಈ ಯೋಜನೆಯಡಿ ಪದವಿ ಕೋರ್ಸ್ ಪೂರ್ಣಗೊಳಿಸುವವರೆಗೆ ವಿದ್ಯಾರ್ಥಿನಿಯರಿಗೆ ಪ್ರತಿವರ್ಷ 30,000 ರೂ.ಗಳನ್ನು ವಿದ್ಯಾರ್ಥಿ ವೇತನವಾಗಿ ನೀಡಲಾಗುತ್ತದೆ. ಈ ವರ್ಷ ಅಜೀಂ ಪ್ರೇಮ್ ಜಿ ಫೌಂಡೇಶನ್ನಿಂದ ಒಟ್ಟು 37,000 ವಿದ್ಯಾರ್ಥಿನಿಯರಿಗೆ ಈ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ. ಈ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳುವುದಕ್ಕೆ ವಿದ್ಯಾರ್ಥಿನಿಯರು ಹತ್ತನೇ ತರಗತಿಯನ್ನು ಮತ್ತು 12ನೇ ತರಗತಿಯನ್ನು ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಪೂರ್ಣಗೊಳಿಸಿರಬೇಕು. ಈ ಯೋಜನೆಯ ಲಾಭ ಪಡೆಯಬೇಕಾದರೆ, ವಿದ್ಯಾರ್ಥಿನಿಯರು ಪ್ರತಿ ವರ್ಷ ತಪ್ಪದೇ ಉತ್ತೀರ್ಣರಾಗಬೇಕು. ಸರ್ಕಾರಿ ಶಾಲೆಗಳಲ್ಲಿ ಹೆಚ್ಚಾಗಿ ಗ್ರಾಮೀಣ ಭಾಗದ ಮಕ್ಕಳಾಗಿದ್ದು, ಇಂತಹ ವಿದ್ಯಾರ್ಥಿನಿಯರಿಗೆ ಅನುಕೂಲವಾಗಲೆಂಬ ಸದುದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಿದ್ದಾರೆ ಎಂದು ಸಿಎಂ ಹೇಳಿದರು.