Wednesday, November 5, 2025

ಸಿಎಂ ಪಟ್ಟ ಖಾಲಿ ಇಲ್ಲ, ಡಿಸಿಎಂ ಸೀಟಿಗೆ ಸಿದ್ಧ! ಜಮೀರ್ ಖಾನ್ ಬಿಗ್ ಸ್ಟೇಟ್ಮೆಂಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಸಚಿವ ಸಂಪುಟ ಪುನಾರಚನೆ ಕುರಿತು ಕಾಂಗ್ರೆಸ್‌ನಲ್ಲಿ ಚರ್ಚೆಗಳು ಗರಿಗೆದರಿರುವ ನಡುವೆಯೇ, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ತಮಗೆ ಉಪಮುಖ್ಯಮಂತ್ರಿ ಸ್ಥಾನದ ಜವಾಬ್ದಾರಿ ಕೊಟ್ಟರೆ ನಿಭಾಯಿಸುವುದಾಗಿ ಹೇಳಿಕೆ ನೀಡಿ ತೀವ್ರ ಕುತೂಹಲಕ್ಕೆ ಕಾರಣರಾಗಿದ್ದಾರೆ.

ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ಮಾತನಾಡಿದ ಸಚಿವರು, “ಜನರು ನನ್ನನ್ನು ಡಿಸಿಎಂ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಪಕ್ಷದ ಹೈಕಮಾಂಡ್ ಆ ತೀರ್ಮಾನ ಕೈಗೊಂಡರೆ, ನಾನು ಆ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲು ಸಿದ್ಧನಿದ್ದೇನೆ” ಎಂದು ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ, “ನನಗೆ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುವ ಸಾಮರ್ಥ್ಯ ನನಗಿದೆ. ನಾನು ಈಗಾಗಲೇ ಎರಡೂವರೆ ವರ್ಷಗಳ ಕಾಲ ಮಂತ್ರಿಯಾಗಿದ್ದೇನೆ. ಒಂದು ವೇಳೆ ಸಚಿವ ಸ್ಥಾನ ಬಿಟ್ಟು ಪಕ್ಷದ ಕೆಲಸ ಮಾಡುವಂತೆ ಹೈಕಮಾಂಡ್ ಸೂಚಿಸಿದರೆ, ಅದಕ್ಕೂ ನಾನು ಸಂಪೂರ್ಣವಾಗಿ ಸಿದ್ಧನಿದ್ದೇನೆ” ಎಂದು ಹೇಳುವ ಮೂಲಕ ತಮ್ಮ ಸಂಪೂರ್ಣ ಬದ್ಧತೆಯನ್ನು ವ್ಯಕ್ತಪಡಿಸಿದರು.

ಸಿಎಂ ಬದಲಾವಣೆ ಇಲ್ಲ, 2028 ರವರೆಗೂ ಸಿದ್ದರಾಮಯ್ಯ:

ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತ ಊಹಾಪೋಹಗಳಿಗೆ ತೆರೆ ಎಳೆಯಲು ಯತ್ನಿಸಿದ ಸಚಿವರು, “ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. ಸಿಎಂ ಬದಲಾವಣೆಯ ಕುರಿತು ಯಾವುದೇ ಒಪ್ಪಂದವೂ ಆಗಿಲ್ಲ. 2028ರವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿರುತ್ತಾರೆ” ಎಂದು ಖಚಿತಪಡಿಸಿದರು. “ನಮ್ಮದು ಹೈಕಮಾಂಡ್ ಪಕ್ಷ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಹೈಕಮಾಂಡ್ ಹಾಕಿದ ಗೆರೆಯನ್ನು ನಾವು ಎಂದಿಗೂ ದಾಟುವುದಿಲ್ಲ” ಎಂದು ಹೇಳುವ ಮೂಲಕ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಪುನರುಚ್ಚರಿಸಿದರು.

ಜಮೀರ್ ಅಹ್ಮದ್ ಖಾನ್ ಅವರ ಈ ಹೇಳಿಕೆಯು, ಸಂಪುಟ ಪುನಾರಚನೆಯ ಸನ್ನಿವೇಶದಲ್ಲಿ ರಾಜಕೀಯ ವಲಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

error: Content is protected !!