Wednesday, November 19, 2025

ಪ್ರಧಾನಿ ಮೋದಿ ಭೇಟಿಯಾದ ಸಿಎಂ ಸಿದ್ದರಾಮಯ್ಯ: ರಾಜ್ಯದ ಐದು ಪ್ರಮುಖ ವಿಚಾರಗಳ ಕುರಿತು ಚರ್ಚೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ಮಾಡಿದರು. ರಾಜ್ಯದ ಐದು ಪ್ರಮುಖ ವಿಚಾರಗಳ ಬಗ್ಗೆ ನರೇಂದ್ರ ಮೋದಿ ಅವರೊಂದಿಗೆ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಭೇಟಿ ವೇಳೆ ಸಿದ್ದರಾಮಯ್ಯ ಅವರಿಗೆ ಸಚಿವ ಕೃಷ್ಣಭೈರೇಗೌಡ ಸಾಥ್ ನೀಡಿದರು.

ನರೇಂದ್ರ ಮೋದಿ ಭೇಟಿ ಬಳಿಕ ದೆಹಲಿಯಲ್ಲಿ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿದರು.

ನಾನು ಕೃಷ್ಣ ಬೈರೈಗೌಡ ಒಟ್ಟಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದೇವು. ನರೇಂದ್ರ ಮೋದಿ ಅವರೊಂದಿಗೆ ಐದು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದು, ಮನವಿ ಪತ್ರಗಳನ್ನು ನೀಡಿದ್ದೇನೆ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ, ಒಟ್ಟು 5 ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ. ​ರಾಜ್ಯದಲ್ಲಿ ಒಟ್ಟು 14,58,000 ಹೆಕ್ಟೇರ್​ ಬೆಳೆ ಹಾನಿಯಾಗಿದ್ದು, ಆ ಕುರಿತು ನಾವು ಜಂಟಿ ಸಮೀಕ್ಷೆ ಮಾಡಿಸಿದ್ದೇವೆ. ರಾಜ್ಯದಲ್ಲಿ ಒಟ್ಟು 3,560 ಕೋಟಿ ನಷ್ಟವಾಗಿದ್ದು, ಮಳೆಯಿಂದಾಗಿ ಮೂಲಸೌಕರ್ಯಗಳಿಗೂ ಹಾನಿಯಾಗಿರುವ ಬಗ್ಗೆ ಪ್ರಧಾನಮಂತ್ರಿಯವರಿಗೆ ಮನವರಿಕೆ ಮಾಡಿದ್ದೇವೆ. ರಾಜ್ಯ ಸರ್ಕಾರವೂ ಬೆಳೆ ಹಾನಿ ಪರಿಹಾರ ಕೊಡುತ್ತಿದ್ದು, ರೈತರಿಗೆ ಕೊಡಬೇಕಾದ ಪರಿಹಾರ 2,800 ಕೋಟಿ ಆಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆಯೂ ಪ್ರಧಾನಿ ಮೋದಿಯವರಿಗೆ ಮಾಹಿತಿ ನೀಡಲಾಗಿದೆ. ಎಫ್​ಆರ್​ಪಿ ನಿಗದಿ ಮಾಡುವುದು ಕೇಂದ್ರ ಸರ್ಕಾರ. ಟನ್​​ಗೆ 3,500 ರೂ. ಕೊಡಬೇಕು ಎಂದು ರೈತರ ಬೇಡಿಕೆ ಇದ್ದು, ರಾಜ್ಯದಲ್ಲಿ 81 ಸಕ್ಕರೆ ಕಾರ್ಖಾನೆಗಳಿವೆ. ರೈತ ಮುಖಂಡರು, ಕಾರ್ಖಾನೆ ಮಾಲೀಕರ ಜೊತೆ ಸಭೆ ನಡೆಸಿ ಪ್ರತಿ ಟನ್ ಕಬ್ಬಿಗೆ 3,300 ರೂ. ನಿಗದಿ ಮಾಡಿದ್ದೆವು. ಸರ್ಕಾರದ ದರ ಒಪ್ಪಿಕೊಂಡು ರೈತರು ಪ್ರತಿಭಟನೆ ಹಿಂಪಡೆದರು. ಆದರೆ, ಸಕ್ಕರೆಗೆ ದರ ನಿಗದಿ ಮಾಡುವುದು ಸಹ ಕೇಂದ್ರ ಸರ್ಕಾರ. ಕೆಜಿ ಸಕ್ಕರೆಗೆ 41 ರೂ. ಮಾಡುವಂತೆ ಬೇಡಿಕೆ ಇದ್ದು, ಆ ಬಗ್ಗೆಯೂ ಮನವಿ ಮಾಡಿದ್ದೇನೆ ಎಂದು ಸಿಎಂ ಹೇಳಿದ್ದಾರೆ.

ಮಹದಾಯಿ ಯೋಜನೆ ವಿಚಾರ ಕೇಂದ್ರ ಸರ್ಕಾರದ ಮುಂದೆ ಇದ್ದು, ಯೋಜನೆ ಜಾರಿಗೆ ಅವರೇ ಅನುಮತಿ ನೀಡಬೇಕು. ಹೀಗಾಗಿ ಆ ಬಗ್ಗೆಯೂ ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದ್ದೇವೆ. ಕುಡಿಯುವ ನೀರಿನ ಯೋಜನೆ ಕೂಡಲೇ ಮಾಡಿ ಅಂತಾ ಹೇಳಲಾಗಿದೆ. ಅಪ್ಪರ್ ಕೃಷ್ಣ ಟ್ರಿಬ್ಯುನಲ್ 2 ಅಂತಿಮ ವರದಿ ಬಂದು 10 ವರ್ಷ ಆದರೂ ಈವರೆಗೆ ಗೆಜೆಟ್ ನೋಟಿಫಿಕೇಷನ್ ಮಾಡಿಲ್ಲ. ಹೀಗಾಗಿ ಶೀಘ್ರ ಆ ಬಗ್ಗೆ ಕ್ರಮವಹಿಸಲು ಒತ್ತಾಯಿಸಿರೋದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮೇಕೆದಾಟು ಯೋಜನೆ ಸಂಬಂಧ ತಮಿಳುನಾಡು ಅರ್ಜಿ ವಜಾ ಆಗಿದ್ದು, ಅನುಮತಿ ಕೊಡಿ ಅಂತಾ CWCಗೆ ಕೇಂದ್ರ ಸರ್ಕಾರ ಹೇಳಬೇಕು. ಕೋರ್ಟ್​​ ಅಡೆತಡೆ ಇಲ್ಲ, ಯೋಜನೆ ಮಾಡಲು ತೊಂದರೆ ಇಲ್ಲ. ಹೀಗಾಗಿ 67 ಟಿಎಂಸಿ ನೀರು ಸಂಗ್ರಹ ಮಾಡ್ತೀವಿ. ತಮಿಳುನಾಡಿಗೆ ಸಹಜವಾಗಿ 177.25 ಟಿಎಂಸಿ ನೀರು ಕೊಡ್ತೀವಿ. ಅದರಲ್ಲೂ ಈ ಬಾರಿ ತಮಿಳುನಾಡಿಗೆ ಅತಿಹೆಚ್ಚು ನೀರು ಹೋಗಿದೆ. ಕುಡಿಯುವ ನೀರು ಯೋಜನೆ ಹಾಗೂ ವಿದ್ಯುತ್ ‌ಉತ್ಪಾದನೆ ತಮಿಳುನಾಡಿಗೂ ಹೆಚ್ಚು ಉಪಯೋಗ ಆಗಲಿದ್ದು, ಕರ್ನಾಟಕದ ಜೊತೆ ಜಗಳ ಆಡೋದು ತಪ್ಪುತ್ತೆ ಎಂದು ಸಿಎಂ ಹೇಳಿದ್ದಾರೆ. ಜೊತೆಗೆ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಸಂಬಂಧವೂ ಪ್ರಧಾನಿಗೆ ಮನವಿ ಮಾಡಲಾಗಿದೆ ಎಂದಿದ್ದಾರೆ.

error: Content is protected !!