Monday, November 10, 2025

ಜಾಣ್ಮೆಯ ಹೆಜ್ಜೆ ಇಟ್ಟ ಸಿಎಂ: ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ‘ಸಂಸ್ಥೆಗಳ’ ಚಟುವಟಿಕೆಗೆ ಬೀಳಲಿದೆ ಕಡಿವಾಣ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದಲ್ಲಿ ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಸಂಘ ಸಂಸ್ಥೆಗಳು ಮತ್ತು ಸಂಘಟನೆಗಳ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಸರ್ಕಾರಿ ಆವರಣಗಳಲ್ಲಿ ಇನ್ನು ಮುಂದೆ ಖಾಸಗಿ ಸಂಸ್ಥೆಗಳ ಚಟುವಟಿಕೆಗಳನ್ನು ನಡೆಸಲು ಪೂರ್ವಾನುಮತಿ ಕಡ್ಡಾಯಗೊಳಿಸಲಾಗಿದೆ. ಈ ಮೂಲಕ ವಿವಾದಕ್ಕೆ ಕಾರಣವಾಗಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘ ಚಟುವಟಿಕೆಗಳಿಗೆ ನಿಯಂತ್ರಣ ಹಾಕಿದಂತಾಗಿದೆ.

ನಿರ್ಧಾರದ ಜಾಣ್ಮೆ ಮತ್ತು ಹಿನ್ನೆಲೆ
ಈ ನಿರ್ಧಾರದಲ್ಲಿ ಸರ್ಕಾರವು ಎಲ್ಲಿಯೂ ನೇರವಾಗಿ ಆರ್‌ಎಸ್‌ಎಸ್‌ ಹೆಸರನ್ನು ಬಳಸದೆ, ‘ಖಾಸಗಿ ಸಂಸ್ಥೆಗಳು’ ಎಂದು ಉಲ್ಲೇಖಿಸುವ ಮೂಲಕ ಜಾಣ್ಮೆಯ ಹೆಜ್ಜೆ ಇರಿಸಿದೆ. ಈ ಹೊಸ ನಿಯಮ ಜಾರಿಯಾದರೆ ಆರ್‌ಎಸ್‌ಎಸ್‌ ಮಾತ್ರವಲ್ಲ, ಎಲ್ಲ ಖಾಸಗಿ ಸಂಘಟನೆಗಳು ಸರ್ಕಾರಿ ಜಾಗಗಳಲ್ಲಿ ಯಾವುದೇ ಚಟುವಟಿಕೆ ಅಥವಾ ಕಾರ್ಯಕ್ರಮ ನಡೆಸುವುದಕ್ಕೂ ಮುನ್ನ ಕಡ್ಡಾಯವಾಗಿ ಸರ್ಕಾರದ ಅನುಮತಿ ಪಡೆಯಬೇಕಾಗುತ್ತದೆ.

ಈ ನಿಯಮವನ್ನು ಜಾರಿಗೆ ತರಲು ಸರ್ಕಾರವು 2013ರ ಬಿಜೆಪಿ ಸರ್ಕಾರದ ಆದೇಶವನ್ನೇ ಆಧಾರವಾಗಿರಿಸಿಕೊಂಡಿದ್ದು, ತಮಿಳುನಾಡು ಸರ್ಕಾರ ಇದೇ ರೀತಿಯಲ್ಲಿ ಕೈಗೊಂಡಿರುವ ನಿರ್ಧಾರವನ್ನೂ ಪರಿಗಣಿಸಿದೆ ಎನ್ನಲಾಗಿದೆ.

ಸರ್ಕಾರಿ ಆವರಣಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಯಂತ್ರಿಸುವಂತೆ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದ ಬೆನ್ನಲ್ಲೇ ಈ ನಿರ್ಧಾರ ಹೊರಬಿದ್ದಿರುವುದು ಗಮನಾರ್ಹ.

error: Content is protected !!