ಹೊಸದಿಗಂತ ಡಿಜಿಟಲ್ ಡೆಸ್ಕ್:
ಉದ್ಯೋಗ ನಿರೀಕ್ಷೆಯಲ್ಲಿರುವ ಉತ್ತರ ಪ್ರದೇಶದ ಯುವಕರಿಗೆ ರಾಜ್ಯ ಸರ್ಕಾರ ಹೊಸ ವರ್ಷದ ಆರಂಭದಲ್ಲೇ ದೊಡ್ಡ ಭರವಸೆ ನೀಡಿದೆ. 2026ರೊಳಗೆ 1.5 ಲಕ್ಷ ಸರ್ಕಾರಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ನಿರ್ಧಾರವನ್ನು ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ. ಈ ಮಹತ್ವದ ನಿರ್ಣಯದೊಂದಿಗೆ ರಾಜ್ಯದ ವಿವಿಧ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎಲ್ಲಾ ಇಲಾಖೆಗಳ ಖಾಲಿ ಹುದ್ದೆಗಳ ಸಂಪೂರ್ಣ ವಿವರವನ್ನು ತಕ್ಷಣ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದರಿಂದ ನೇಮಕಾತಿ ಪ್ರಕ್ರಿಯೆಯಲ್ಲಿ ವಿಳಂಬವಾಗದಂತೆ ನೋಡಿಕೊಳ್ಳಲು ಸರ್ಕಾರ ಉದ್ದೇಶಿಸಿದೆ. ಪೊಲೀಸ್, ಶಿಕ್ಷಣ, ಕಂದಾಯ, ಆರೋಗ್ಯ, ವಸತಿ, ಮಕ್ಕಳ ಅಭಿವೃದ್ಧಿ, ಪೋಷಣೆ ಹಾಗೂ ಕಾರಾಗೃಹ ಇಲಾಖೆಗಳು ಈ ನೇಮಕಾತಿಯ ಭಾಗವಾಗಲಿವೆ.
ಸರ್ಕಾರದ ಮಾಹಿತಿಯಂತೆ, ಕಳೆದ 8.5 ವರ್ಷಗಳಲ್ಲಿ ಈಗಾಗಲೇ 8.5 ಲಕ್ಷಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಹೊಸ ನೇಮಕಾತಿಯೊಂದಿಗೆ ಹತ್ತು ವರ್ಷಗಳಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿ ಗುರಿಯನ್ನು ಸಾಧಿಸುವ ವಿಶ್ವಾಸವನ್ನು ಸರ್ಕಾರ ವ್ಯಕ್ತಪಡಿಸಿದೆ.
ಖಾಲಿ ಹುದ್ದೆಗಳ ಅಧಿಸೂಚನೆಗಳು ಅಂತಿಮ ಹಂತದಲ್ಲಿದ್ದು, ಕೆಲ ಇಲಾಖೆಗಳು ಈಗಾಗಲೇ ಪ್ರಕ್ರಿಯೆ ಆರಂಭಿಸಿವೆ. ನೇಮಕಾತಿ ಸಂಪೂರ್ಣ ಪಾರದರ್ಶಕ ಹಾಗೂ ಅರ್ಹತೆ ಆಧಾರಿತವಾಗಿರಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

