ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಕ್ಷೀರ ಉತ್ಪಾದಕರಿಗೆ ಮಹತ್ವದ ಭರವಸೆಯೊಂದನ್ನು ನೀಡಿದ್ದಾರೆ. ಸದ್ಯ ಹಾಲಿನ ಉತ್ಪಾದನೆಗೆ ನೀಡಲಾಗುತ್ತಿರುವ ₹5 ಪ್ರೋತ್ಸಾಹಧನವನ್ನು ಶೀಘ್ರದಲ್ಲೇ ₹7ಕ್ಕೆ ಹೆಚ್ಚಿಸುವುದಾಗಿ ಘೋಷಿಸುವ ಮೂಲಕ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದಾರೆ.
ಪ್ರೋತ್ಸಾಹಧನವು ಸರಿಯಾಗಿ ರೈತರಿಗೆ ತಲುಪುತ್ತಿಲ್ಲ ಎಂಬ ದೂರುಗಳ ಬಗ್ಗೆ ಮಾತನಾಡಿದ ಸಿಎಂ, ಬೆಲೆ ಏರಿಕೆಯ ಸವಾಲುಗಳ ನಡುವೆಯೂ ಸರ್ಕಾರ ರೈತರ ಬೆನ್ನಿಗೆ ನಿಲ್ಲಲಿದೆ ಎಂದು ಭರವಸೆ ನೀಡಿದರು. ರೈತರ ಆರ್ಥಿಕ ಸಬಲೀಕರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.
ತಮ್ಮ ಸರ್ಕಾರದ ಕಾರ್ಯವೈಖರಿಯನ್ನು ಸಮರ್ಥಿಸಿಕೊಂಡ ಸಿದ್ದರಾಮಯ್ಯ, ಹಿಂದಿನ ಅವಧಿಯ (2013-18) 165 ಭರವಸೆಗಳಲ್ಲಿ 158ನ್ನು ಈಡೇರಿಸಿದ್ದಾಗಿ ತಿಳಿಸಿದರು. ಅಷ್ಟೇ ಅಲ್ಲದೆ, ಪ್ರಸ್ತುತ ಸರ್ಕಾರದ ಅವಧಿಯಲ್ಲಿ ನೀಡಿರುವ 593 ಭರವಸೆಗಳ ಪೈಕಿ ಈಗಾಗಲೇ 293 ಭರವಸೆಗಳನ್ನು ಪೂರೈಸಲಾಗಿದೆ. ಬಾಕಿ ಉಳಿದಿರುವ ಆಶ್ವಾಸನೆಗಳನ್ನು ಮುಂದಿನ ಮೂರು ಬಜೆಟ್‌ಗಳಲ್ಲಿ ಹಂತ-ಹಂತವಾಗಿ ಜಾರಿಗೆ ತರುವುದಾಗಿ ಅವರು ಸದನಕ್ಕೆ ತಿಳಿಸಿದರು.

