ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕರ ನಡುವೆ ಕುರ್ಚಿ ಕಿತ್ತಾಟದ ಬಿಸಿ ಏರಿರುವಾಗಲೇ, ಬೆಳಗಾವಿಯಲ್ಲಿ ‘ಡಿನ್ನರ್ ರಾಜಕೀಯ’ದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಬುಧವಾರ ರಾತ್ರಿ, ಸಿಎಂ ಅವರು ಮಾಜಿ ಶಾಸಕ ಫಿರೋಜ್ ಸೇಠ್ ಅವರ ನಿವಾಸದಲ್ಲಿ ಅಹಿಂದ ನಾಯಕರೊಂದಿಗೆ ರಹಸ್ಯ ಭೋಜನ ಕೂಟ ನಡೆಸಿದರು.
ಬೆಳಗಾವಿಯ ಟಿವಿ ಸೆಂಟರ್‌ನಲ್ಲಿರುವ ಫಿರೋಜ್ ಸೇಠ್ ನಿವಾಸದಲ್ಲಿ ನಡೆದ ಈ ಸಭೆಯಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಸಭಾಧ್ಯಕ್ಷ ಯು.ಟಿ. ಖಾದರ್, ಸಚಿವ ಜಮೀರ್ ಅಹಮದ್, ಭೈರತಿ ಸುರೇಶ್, ಮತ್ತು ಎಂಎಲ್‌ಸಿ ಸಲೀಂ ಅಹ್ಮದ್ ಸೇರಿದಂತೆ ಹಲವು ಪ್ರಮುಖರು ಭಾಗಿಯಾಗಿದ್ದರು. ಈ ಡಿನ್ನರ್ ಮೀಟಿಂಗ್‌ನಲ್ಲಿ ಚಾಲ್ತಿಯಲ್ಲಿರುವ ರಾಜಕೀಯ ವಿದ್ಯಮಾನಗಳ ಕುರಿತು ಗಹನ ಚರ್ಚೆ ನಡೆದಿದೆ ಎನ್ನಲಾಗಿದೆ.
ಫಿರೋಜ್ ಸೇಠ್ ಅವರು ಭೋಜನಕ್ಕಾಗಿ ಭರ್ಜರಿ ಏರ್ಪಾಡು ಮಾಡಿದ್ದರು. ತರಹೇವಾರಿ ಮೀನಿನ ಖಾದ್ಯಗಳು, ಮಟನ್ ಚಾಪ್ಸ್, ಬಾಯಲ್ಲಿ ನೀರೂರಿಸುವ ಮಟನ್ ಬಿರಿಯಾನಿ ಸೇರಿದಂತೆ 30ಕ್ಕೂ ಹೆಚ್ಚು ಬಗೆಯ ರುಚಿಕರ ಖಾದ್ಯಗಳನ್ನು ಸಿದ್ಧಪಡಿಸಲಾಗಿತ್ತು.
ಅಹಿಂದ ನಾಯಕರು ಒಂದು ಕಡೆ ಡಿನ್ನರ್ ಪಾಲಿಟಿಕ್ಸ್‌ನಲ್ಲಿ ತೊಡಗಿದ್ದರೆ, ಮತ್ತೊಂದು ಕಡೆ ವಾಲ್ಮೀಕಿ ಸಮುದಾಯದ ಶಾಸಕರು ಪ್ರತ್ಯೇಕ ಸಭೆ ನಡೆಸಿದ್ದಾರೆ. ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಈ ಮಹತ್ವದ ಸಭೆಯನ್ನು ಸಚಿವ ಸತೀಶ್ ಜಾರಕಿಹೊಳಿ ಅವರು ಮುನ್ನಡೆಸಿದರು.
ಸಭೆಯಲ್ಲಿ ಶಾಸಕರಾದ ಕಂಪ್ಲಿ ಗಣೇಶ್, ಚಳ್ಳಕೆರೆ ರಘು, ಬಸನಗೌಡ ತುರವಿಹಾಳ್, ಬಸನಗೌಡ ದದ್ದಲ್ ಮತ್ತು ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಅವರು ಭಾಗಿಯಾಗಿದ್ದರು. ಈ ಸಭೆಯಲ್ಲಿ ಮುಂಬರುವ ವಾಲ್ಮೀಕಿ ಜಾತ್ರೆ ಆಯೋಜನೆ ಹಾಗೂ ಸಮುದಾಯಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳ ಬಗ್ಗೆ ನಾಯಕರು ಸಮಾಲೋಚನೆ ನಡೆಸಿದರು.
ಒಟ್ಟಾರೆಯಾಗಿ, ಬೆಳಗಾವಿಯಲ್ಲಿ ಸಿಎಂ ನೇತೃತ್ವದಲ್ಲಿ ನಡೆದ ‘ಅಹಿಂದ’ ಭೋಜನಕೂಟ ಮತ್ತು ವಾಲ್ಮೀಕಿ ಸಮುದಾಯದ ಶಾಸಕರ ಪ್ರತ್ಯೇಕ ಸಭೆ, ಕಾಂಗ್ರೆಸ್ ಪಾಳಯದಲ್ಲಿ ನಡೆಯುತ್ತಿರುವ ಗುಂಪುಗಾರಿಕೆ ಮತ್ತು ಅಧಿಕಾರ ಹಂಚಿಕೆಯ ಸೂಕ್ಷ್ಮತೆಯನ್ನು ಮತ್ತಷ್ಟು ಹೆಚ್ಚಿಸಿದೆ.

