Friday, January 9, 2026

ಹಾವೇರಿ ಅಭಿವೃದ್ಧಿಗೆ ಸಿಎಂ ‘ಮಹಾಸಂಕಲ್ಪ’: ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ, ಟ್ರಾಮಾ ಸೆಂಟರ್ ಭಾಗ್ಯ!

ಹೊಸದಿಗಂತ ಹಾವೇರಿ :


ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಜಿಲ್ಲೆಗೊಂದು ಸೂಪರ್ ಸ್ಪೆಶಾಲಿಟಿ ಹಾಸ್ಪಿಟಲ್, ಟ್ರಾಮಾ ಸೆಂಟರ್, ಕ್ಯಾನ್ಸರ್ ಆಸ್ಪತ್ರೆಯನ್ನೂ ಮಾಡುತ್ತೇವೆ. ಈ ಮೂಲಕ ಹಾವೇರಿ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಹಾವೇರಿ ಮೆಡಿಕಲ್ ಕಾಲೇಜಿನ ಉದಘಾಟನರ ಹಾಗೂ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಹಿಂದೆ ನಾನೇ ಸಿಎಂ ‌ಆಗಿದ್ದ ವೇಳೆ ಈ ಕಾಲೇಜ್ ಘೋಷಿಸಿದ್ದೆ. ಕಾರಣಾಂತರಗಳಿಂದ ಗುದ್ದಲಿ ಪೂಜೆ ಮಾಡಲಾಗಲಿಲ್ಲ. ಪ್ರತಿ ಜಿಲ್ಲೆಯಲ್ಲಿ ಒಂದು ಮೆಡಿಕಲ್ ಕಾಲೇಜ್ ಮಾಡಬೇಕು ಎಂದು ನಾನು ಘೋಷಿಸಿದ್ದೆ. ಈಗ ರಾಜ್ಯದಲ್ಲಿ ಒಟ್ಟು 70 ಮೆಡಿಕಲ್ ಕಾಲೇಜುಗಳಿದ್ದು ಅದರಲ್ಲಿ 22 ಸರ್ಕಾರಿ ಮೆಡಿಕಲ್ ಕಾಲೇಜುಗಳು. ವಿಜಯಪುರದಲ್ಲೂ ಸಹ ಮೆಡಿಕಲ್ ಕಾಲೇಜ್ ಮಾಡುತ್ತೇವೆ. ಯಾವ ಜಿಲ್ಲೆಯಲ್ಲಿ ಇಲ್ಲವೋ ಅಲ್ಲೆಲ್ಲ ಮಾಡುತ್ತೇವೆ ಎಂದರು.

ಬಸವರಾಜ ಬೊಮ್ಮಾಯಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ಮನವಿ ಮಾಡಿದ್ದು, ಮಾಡೋಣ ಎಂದು ಘೋಷಿಸಿದರು. ಬಿಜೆಪಿಯಲ್ಲಿ ಇದ್ದರೂ ಅವರು ನಮ್ಮ ಮನುಷ್ಯನೇ. ತೋರಿಕೆಗೆ ಇಲ್ಲ ಎನ್ನಬಹುದು. ಎಸ್.ಆರ್. ಬೊಮ್ನಾಯಿ ನಾವು ಆತ್ಮೀಯರು. ಇವರೂ ಬಿಜೆಪಿ ಸೇರುವ ಮುಂಚೆ ನಮ್ಮ ಜತೆ ಚೆನ್ನಾಗಿದ್ದರು. ರಾಜಕೀಯ ಕಾರಣಕ್ಕೆ ವಿರೋಧಿಸುತ್ತಾರೆ ಎಂದು ನಗೆ ಚಟಾಕಿ ಹಾರಿಸಿದರು.

ಸಮಾಜದಲ್ಲಿ ಬಡವರು ಹೆಚ್ಚಾಗಿದ್ದಾರೆ. ಅವರೆಲ್ಲರೂ ಸರ್ಕಾರಿ ಆಸ್ಪತ್ರೆಯನ್ನೇ ನಂಬಿದ್ದಾರೆ. ಹಾಗಾಗಿ, ಪ್ರತಿ ಜಿಲ್ಲೆಯಲ್ಲೂ ಮೆಡಿಕಲ್ ಕಾಲೇಜ್, ಸೂಪರ್ ಸ್ಪೆಶಾಲಿಟಿ, ಟ್ರಾಮಾ ಸೆಂಟರ್, ಕ್ಯಾನ್ಸರ್ ಆಸ್ಪತ್ರೆ ಮಾಡಬೇಕು. ನಮ್ಮ ಸರ್ಕಾರ ಯಾವುದೆ ತಾರತಮ್ಯ ಇಲ್ಲದೇ ಎಲ್ಲರನ್ನೂ ಸಮಾನವಾಗಿ ಕಾಣುತ್ತದೆ. ಹಾಗಾಗಿ, ಎಲ್ಲ ಧರ್ಮ, ಜಾತಿಯ ಬಡವರಿಗೆ ಗ್ಯಾರಂಟಿ ಜಾರಿಗೊಳಿಸಿದ್ದೇವೆ. ಕಟ್ಟಕಡೆಯ ವ್ಯಕ್ತಿಗೂ ಮೂಲ ಸೌಲಭ್ಯ ಸಿಗಬೇಕು. ಆಗ ಮಾತ್ರ ಜ್ಯಾತ್ಯಾತೀತ ಸಮಾಜ ನಿರ್ಮಾಣ ಸಾಧ್ಯ ಎಂದರು.

ಗ್ಯಾರಂಟಿ ಯೋಜನೆ ಜಾರಿಗೊಳಿಸಿದರೆ ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿ ಆಗುತ್ತದೆ ಎಂದರು. ನಮ್ಮ ಸರ್ಕಾರ ಎರಡೂವರೆ ವರ್ಷ ಆಗಿದೆ. ೧.೧೨ ಲಕ್ಷ ಕೋಟಿ ರೂಪಾಯಿ ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡಿದೆ. ಆದರೂ ನಮ್ಮ‌ ಸರ್ಕಾರ ಆರ್ಥಿಕವಾಗಿ ದಿವಾಳಿ ಆಗಿಲ್ಲ. ಪ್ರತಿ ವರ್ಷ ಗ್ಯಾರಂಟಿಗಾಗಿ ೫೨ ಸಾವಿರ ಕೋಟಿ ರೂ. ಖರ್ಚು ಮಾಡುತ್ತಿದೆ. ಈ ವರ್ಷ ೮೫ ಸಾವಿರ ಕೋಟಿ ಆಯವ್ಯಯ ಇದೆ. ಜನರಲ್ಲಿ ತಪ್ಪು ಕಲ್ಪನೆ ಬಿಂಬಿಸುವ ಕೆಲಸ ಆಗಬಾರದು. ಹಾವೇರಿಯಲ್ಲಿ ಸುಮಾರು ೫೦೦ ಕೋಟಿ ಖರ್ಚು ಮಾಡಿ ಮೆಡಿಕಲ್ ಕಾಲೇಜ್ ನಿರ್ಮಿಸಿದ್ದೇವೆ. ೧೯೪ ಕೋಟಿ ಕೆಂದ್ರ ಕೊಟ್ಟಿದೆ. ಏನೇ ಆಗಲಿ ಈಗ ಪೂರ್ಣಗೊಂಡಿದೆ ಎಂದರು.

ನೀರಾವರಿ ಯೋಜನೆಗಳಿಗೆ ಚಾಲನೆ ಕೊಡಲು ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲೇ ಹೋಗೋಣ. ಬೊಮ್ಮಾಯಿ ಪಾದಯಾತ್ರೆ ಮಾಡಿದ್ದು ಮಹದಾಯಿ ಹಾಗೂ ಕೃಷ್ಣಾ ಯೋಜನೆ ಮೂರನೇ ಹಂತ ಜಾರಿ ಆಗಬೇಕಿದೆ. ಈ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆದು ಕೆಲಸಗಳನ್ನು ಮಾಡೋಣ. ಅಪ್ಪರ್ ಕೃಷ್ಣ ಮುಗಿಯಲೇಬೇಕು. ಇಲ್ಲದಿದ್ದರೆ ನಮಗೆ ಬರಬೇಕಿರುವ ೧೭೩ ಟಿಎಂಸಿ ನೀರು ಬಳಸಲು ಯೋಜನೆ ಆಗಲೇಬೇಕು. ಇದಕ್ಕೆ ಬಸವರಾಜ ಬೊಮ್ನಾಯಿ ಜವಾಬ್ದಾರಿ ತೆಗೆದುಕೊಳ್ಳಲಿ ಎಂದರು.

ಹಾವೇರಿ ಜಿಲ್ಲೆಯನ್ನು ಮಾದರಿ ಜಿಲ್ಲೆಯಾಗಿ‌ ಮಾಡುವ ಪ್ರಯತ್ನ ನಮ್ಮ ಸರ್ಕಾರ ಮಾಡುತ್ತದೆ ಎಂದು ಭರವಸೆ ನೀಡಿದರು.

ಈ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ, ಸಚಿವರಾದ ಶಿವಾನಂದ ಪಾಟೀಲ, ಡಾ.ಶರಣ ಪ್ರಕಾಶ ಪಾಟೀಲ, ಸಂಸದ ಬೊಮ್ಮಾಯಿ ಮತ್ತಿತರರು ಇದ್ದರು.

error: Content is protected !!