ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುನಿರೀಕ್ಷಿತ ಹಳದಿ ಮೆಟ್ರೋ ಮಾರ್ಗ (Yellow Line) ಇಂದು ಲೋಕಾರ್ಪಣೆಯಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ರಾಗಿಗುಡ್ಡ ಮೆಟ್ರೋ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸಿ, ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ಸ್ಟೇಷನ್ ವರೆಗೆ ಸ್ವತಃ ಮೆಟ್ರೋ ಪ್ರಯಾಣ ಮಾಡುವ ನಿರೀಕ್ಷೆಯಿದೆ. ಈ ವಿಶೇಷ ಪ್ರಯಾಣಕ್ಕೆ ಮಹಿಳಾ ಲೋಕೋ ಪೈಲಟ್ ವಿನುತಾ ಸಾರಥಿ ಆಗಲಿದ್ದಾರೆ.
ಈ ಪ್ರಯಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ 117 ಮಂದಿ ಭಾಗವಹಿಸಲಿದ್ದಾರೆ. ಎಂಟು ಮಕ್ಕಳು, ಎಂಟು ಮೆಟ್ರೋ ಉದ್ಯೋಗಿಗಳು, ಸರ್ಕಾರಿ ಶಾಲೆಯ 16 ವಿದ್ಯಾರ್ಥಿಗಳು, ಹಳದಿ ಮಾರ್ಗ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಎಂಟು ಕಾರ್ಮಿಕರು ಹಾಗೂ ಆಯ್ಕೆಗೊಂಡ ಎಂಟು ಸಾಮಾನ್ಯ ಪ್ರಯಾಣಿಕರು ಮೊದಲ ಬೋಗಿಯಲ್ಲಿ ಮೋದಿಯೊಂದಿಗೆ ಸಂಚರಿಸಲಿದ್ದಾರೆ.
ರಾಗಿಗುಡ್ಡದಿಂದ ಕೋನಪ್ಪನ ಅಗ್ರಹಾರ (ಇನ್ಫೋಸಿಸ್ ಫೌಂಡೇಶನ್) ಮೆಟ್ರೋ ನಿಲ್ದಾಣದವರೆಗೆ ಮೋದಿ ಪ್ರಯಾಣಿಸುವ ಸಂದರ್ಭದಲ್ಲಿ, ಜಯದೇವ, ಸಿಲ್ಕ್ ಬೋರ್ಡ್, ಹೊಂಗಸಂದ್ರ, ಸಿಂಗಸಂದ್ರ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಆರು ನಿಲ್ದಾಣಗಳಲ್ಲಿ ಐದು ನಿಮಿಷಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಪ್ರಸ್ತುತ, ಡ್ರೈವರ್‌ಲೆಸ್ ರೈಲು ಸೇವೆ ತಾಂತ್ರಿಕ ಕಾರಣಗಳಿಂದ ಇನ್ನೂ ಆರಂಭವಾಗಿಲ್ಲ. ಆರು ತಿಂಗಳ ನಂತರ ರೈಲ್ವೆ ಸುರಕ್ಷತಾ ಆಯುಕ್ತರಿಂದ ಪರಿಶೀಲನೆ ನಡೆದ ನಂತರ ಮಾತ್ರ ಈ ವ್ಯವಸ್ಥೆ ಜಾರಿಗೆ ಬರಲಿದೆ.
ಇಂದು ಉದ್ಘಾಟನೆ ನಡೆದರೂ ಸಾಮಾನ್ಯರಿಗೆ ಪ್ರಯಾಣ ಅವಕಾಶ ನಾಳೆಯಿಂದಲೇ ಲಭ್ಯವಾಗಲಿದೆ. ನಾಳೆ ಬೆಳಗ್ಗೆ 5 ಗಂಟೆಯಿಂದ ಹಳದಿ ಮಾರ್ಗದಲ್ಲಿ ಸಾರ್ವಜನಿಕ ಸಂಚಾರ ಆರಂಭವಾಗಲಿದೆ.