ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಹಲವು ಮಕ್ಕಳ ಸಾವಿಗೆ ಕಾರಣವಾದ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ತಯಾರಕ ಕಂಪನಿಯಾದ ಸ್ರೇಸನ್ ಫಾರ್ಮಾಸ್ಯುಟಿಕಲ್ಸ್‌ನ ಉತ್ಪಾದನಾ ಪರವಾನಗಿಯನ್ನು ತಮಿಳುನಾಡು ಔಷಧ ನಿಯಂತ್ರಣ ಇಲಾಖೆ ರದ್ದುಗೊಳಿಸಿದೆ. ಅಲ್ಲದೇ, ಕಂಪನಿಯನ್ನು ಶಾಶ್ವತವಾಗಿ ಮುಚ್ಚುವಂತೆ ಆದೇಶ ನೀಡಿದೆ.
ಏನಿದು ಪ್ರಕರಣ?
ಕೆಮ್ಮಿನ ಸಿರಪ್ ಸೇವಿಸಿ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ 20ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದ ಘಟನೆ ರಾಷ್ಟ್ರವ್ಯಾಪಿ ಆತಂಕ ಮೂಡಿಸಿತ್ತು. ಈ ಮಕ್ಕಳ ಸಾವಿಗೆ ಮೂತ್ರಪಿಂಡದ ಸೋಂಕು ಕಾರಣವಾಗಿತ್ತು. ತನಿಖೆಯ ವೇಳೆ, ಸ್ರೇಸನ್ ಫಾರ್ಮಾ ತಯಾರಿಸಿದ ಈ ಸಿರಪ್‌ನಲ್ಲಿ ವಿಷಕಾರಿ ದ್ರಾವಣಗಳಾದ ಡೈಎಥಿಲೀನ್ ಗ್ಲೈಕೋಲ್ ಮತ್ತು ಎಥಿಲೀನ್ ಗ್ಲೈಕೋಲ್ ಇರುವುದು ದೃಢಪಟ್ಟಿದೆ. ವಿಷಕಾರಿ ಅಂಶಗಳಿದ್ದ ಸಿರಪ್ ಸೇವನೆಯಿಂದಲೇ ಮಕ್ಕಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ವಿಷಕಾರಿ ದ್ರಾವಣವಿರುವ ಸಿರಪ್ ತಯಾರಿಸಿದ ಕಾರಣಕ್ಕಾಗಿ ಸ್ರೇಸನ್ ಕಂಪನಿಯನ್ನು ಅಧಿಕೃತವಾಗಿ ಮುಚ್ಚಲಾಗಿದೆ ಎಂದು ತಮಿಳುನಾಡು ಆರೋಗ್ಯ ಇಲಾಖೆ ತಿಳಿಸಿದೆ. ಈ ಮಹತ್ವದ ನಿರ್ಧಾರದ ಬೆನ್ನಲ್ಲೇ, ತಮಿಳುನಾಡಿನ ಎಲ್ಲಾ ಔಷಧ ಉತ್ಪಾದನಾ ಘಟಕಗಳಲ್ಲೂ ಸಮಗ್ರ ತಪಾಸಣೆ ನಡೆಸಲು ಇಲಾಖೆಯು ಆದೇಶಿಸಿದೆ.
ಈ ಪ್ರಕರಣ ಸಂಬಂಧ, ಕೋಲ್ಡ್ರಿಫ್ ಕೆಮ್ಮಿನ ಸಿರಪ್ ತಯಾರಿಸುವ ಸ್ರೇಸನ್ ಫಾರ್ಮಾ ಮಾಲೀಕ ರಂಗನಾಥನ್‌ನನ್ನು ಈಗಾಗಲೇ ಮಧ್ಯಪ್ರದೇಶ ಪೊಲೀಸರು ಚೆನ್ನೈನಲ್ಲಿ ಬಂಧಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸಿಬಿಐ ತನಿಖೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಇದರ ಜೊತೆಗೆ, ಜಾರಿ ನಿರ್ದೇಶನಾಲಯವು ಸಹ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ಚೆನ್ನೈನಲ್ಲಿ ಸ್ರೇಸನ್ ಫಾರ್ಮಾ ಮತ್ತು ತಮಿಳುನಾಡು ಔಷಧ ನಿಯಂತ್ರಣ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಸಂಬಂಧಿಸಿದ 7 ಸ್ಥಳಗಳ ಮೇಲೆ ದಾಳಿ ನಡೆಸಿ ತನಿಖೆ ಮುಂದುವರೆಸಿದೆ.

