ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ಬೇರೆ ಬೇರೆ ಭಾಷೆ ಮಾತನಾಡುವ ಲಕ್ಷಾಂತರ ಮಂದಿ ಇರುವ ಕಾರಣ ಭಾಷೆ ವಿಷಯ ಸೂಕ್ಷ್ಮವಾಗಿದೆ. ಅದರಲ್ಲೂ ಬೆಂಗಳೂರಿಗರು ತಮ್ಮ ಮಾತೃಭಾಷೆ ಕನ್ನಡ ಭಾಷೆ ವಿಷಯಕ್ಕೆ ಬಂದರೆ ಸುಮ್ಮನೆ ಇರುವ ಮಾತೇ ಇಲ್ಲ.
ಕನ್ನಡ ಭಾಷೆ ಮಾತನಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಇಂಜಿನಿಯರಿಂಗ್ ಕಾಲೇಜೊಂದರ ಹಾಸ್ಟೆಲ್ ವಾರ್ಡನ್ ಒಬ್ಬರನ್ನು ಕೆಲಸದಿಂದ ವಜಾ ಮಾಡಿ ಮನೆಗೆ ಕಳುಹಿಸಲಾಗಿದೆ. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಎಎಂಸಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಘಟನೆ ನಡೆದಿದೆ. ಕಾಲೇಜು ಕ್ಯಾಂಪಸ್‌ನಲ್ಲಿ ಕನ್ನಡ ಮಾತನಾಡಬೇಡಿ ಕನ್ನಡ ಮನೆಯಲ್ಲಿ ಮಾತನಾಡಿ ಎಂದು ಆ ವಾರ್ಡನ್ ವಿದ್ಯಾರ್ಥಿಗಳಿಗೆ ಸೂಚಿಸುತ್ತಿರುವ ವೀಡಿಯೋ ವೈರಲ್ ಆದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಬೇಸಿಗೆಯ ಬಾಯಾರಿಕೆಯಿಂದ ಸೌಂದರ್ಯದ ರಹಸ್ಯದವರೆಗೆ: ಆರೋಗ್ಯದ ಸಂಜೀವಿನಿ ಈ ನಿಂಬೆ!
ಹೀಗೆ ಕನ್ನಡ ಭಾಷೆ ಮಾತನಾಡಬೇಡಿ ಎಂದು ಹೇಳಿ ಅಮಾನಾತ್ತಾದ ಇಂಜಿನಿಯರಿಂಗ್ ಕಾಲೇಜಿನ ವಾರ್ಡನ್‌ನನ್ನು ಸುರೇಶ್ ಪಿವಿ ಎಂದು ಗುರುತಿಸಲಾಗಿದೆ. ಇಂಜಿನಿಯರಿಂಗ್ ಕಾಲೇಜು ಹಾಸ್ಟೆಲ್ ವಾರ್ಡನ್ ಆಗಿದ್ದ ಇವರು, ಹಾಸ್ಟೆಲ್‌ನಲ್ಲಿ ವಾಸವಿದ್ದ ವಿದ್ಯಾರ್ಥಿಗಳಿಗೆ, ಕನ್ನಡ ಮಾತನಾಡಬೇಡಿ, ಕನ್ನಡವನ್ನು ನಿಮ್ಮ ಮನೆಯಲ್ಲಿ ಮಾತನಾಡಿ ಎಂದು ಹಿಂದಿ ಭಾಷೆಯಲ್ಲಿ ಹೇಳುತ್ತಿರುವ ವೀಡಿಯೋ ವೈರಲ್ ಆಗಿದೆ. ವಿದ್ಯಾರ್ಥಿಗಳು ಅವರು ಹೀಗೆ ಹೇಳುತ್ತಿರುವ ವೀಡಿಯೋವನ್ನು ರಹಸ್ಯವಾಗಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ ನಂತರ ಈ ಘಟನೆ ನಡೆದಿದೆ.
ಈ ವಾರ್ಡನ್‌ನ ಈ ಸೂಚನೆಗೆ ವಿದ್ಯಾರ್ಥಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪಿವಿ ಸುರೇಶ್, ವಿದ್ಯಾರ್ಥಿಗಳು ತಮ್ಮ ರಾಜ್ಯ ಭಾಷೆ ಮಾತನಾಡುವುದಕ್ಕೆ ಕಾಲೇಜು ಆಡಳಿತ ಮಂಡಳಿಯಿಂದ ಮೊದಲೇ ಅನುಮತಿ ಪಡೆದಿರಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದ್ದಾರೆ.

