ಬೀಟ್ರೂಟ್ ಒಂದು ಪೌಷ್ಟಿಕಾಂಶಗಳಿಂದ ಸಮೃದ್ಧವಾದ ತರಕಾರಿ. ಇದರಲ್ಲಿ ಕಬ್ಬಿಣ, ಫೋಲಿಕ್ ಆಮ್ಲ, ಫೈಬರ್ ಹಾಗೂ ವಿಟಮಿನ್‌ಗಳು ಹೆಚ್ಚಾಗಿ ದೊರೆಯುತ್ತವೆ. ಸಾಮಾನ್ಯವಾಗಿ ಬೀಟ್ರೂಟ್ ಅನ್ನು ಸ್ಯಾಲಡ್ ಅಥವಾ ಪಲ್ಯಗಳಲ್ಲಿ ಬಳಸಲಾಗುತ್ತದೆ. ಆದರೆ ಚಪಾತಿಗೆ ಸೇರಿಸಿದರೆ ಅದು ಬಣ್ಣದ ಜೊತೆಗೆ, ಆರೋಗ್ಯದ ಲಾಭ ಹಾಗೂ ರುಚಿಯ ಸೊಗಸನ್ನು ಹೆಚ್ಚಿಸುತ್ತದೆ. ಮಕ್ಕಳಿಗೂ ಇದು ತುಂಬಾ ಇಷ್ಟವಾಗುತ್ತೆ.
ಬೇಕಾಗುವ ಸಾಮಗ್ರಿಗಳು:
ಗೋಧಿ ಹಿಟ್ಟು – 2 ಕಪ್
ಬೀಟ್ರೂಟ್ – 1 ಮಧ್ಯಮ ಗಾತ್ರದ (ಪೇಸ್ಟ್ ಮಾಡಿದ್ದು)
ಹಸಿಮೆಣಸು – 1
ಶುಂಠಿ – ಸಣ್ಣ ತುಂಡು
ಉಪ್ಪು – ರುಚಿಗೆ ತಕ್ಕಂತೆ
ಎಣ್ಣೆ – 1 ಟೀ ಸ್ಪೂನ್
ನೀರು – ಅಗತ್ಯಕ್ಕೆ ತಕ್ಕಂತೆ
ತಯಾರಿಸುವ ವಿಧಾನ:
ಮೊದಲು ಬೀಟ್ರೂಟ್ ಅನ್ನು ತೊಳೆದು ಸಿಪ್ಪೆ ತೆಗೆದು ತುರಿದುಕೊಳ್ಳಿ. ನಂತರ ಮಿಕ್ಸಿಯಲ್ಲಿ ಹಾಕಿ ಶುಂಠಿ ಹಾಗೂ ಹಸಿಮೆಣಸಿನ ಜೊತೆಗೆ ಪೇಸ್ಟ್ ಮಾಡಿ.
ಈಗ ಒಂದು ದೊಡ್ಡ ಬಟ್ಟಲಿನಲ್ಲಿ ಗೋಧಿ ಹಿಟ್ಟು, ಉಪ್ಪು ಹಾಗೂ ತಯಾರಿಸಿದ ಬೀಟ್ರೂಟ್ ಪೇಸ್ಟ್ ಸೇರಿಸಿ. ಇದಕ್ಕೆ ಸ್ವಲ್ಪ ಎಣ್ಣೆ ಹಾಕಿ, ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಿ ಮೃದುವಾದ ಹಿಟ್ಟು ಕಲಸಿ,15-20 ನಿಮಿಷ ಮುಚ್ಚಿ ಇಡಿ.
ನಂತರ ಚಿಕ್ಕಚಿಕ್ಕ ಉಂಡೆ ಮಾಡಿ ಚಪಾತಿ ಲಟ್ಟಿಸಿ. ತವಾ ಬಿಸಿ ಮಾಡಿ, ಚಪಾತಿಯನ್ನು ಎರಡೂ ಬದಿಯಲ್ಲಿ ಚೆನ್ನಾಗಿ ಬೇಯಿಸಿ. ಬೇಕಾದರೆ ತುಪ್ಪ ಅಥವಾ ಎಣ್ಣೆ ಹಚ್ಚಬಹುದು.