January21, 2026
Wednesday, January 21, 2026
spot_img

ಆಡಲು ಭಾರತಕ್ಕೆ ಬನ್ನಿ, ಇಲ್ಲವೇ ಟೂರ್ನಿನಿಂದಲೇ ಔಟ್: ಬಾಂಗ್ಲಾಗೆ 24 ಗಂಟೆಯ ಡೆಡ್ ಲೈನ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಭಾರತದಲ್ಲಿ ನಡೆಯುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಲ್ಲ ಎಂದು ಪಟ್ಟುಹಿಡಿದಿದ್ದ ಬಾಂಗ್ಲಾದೇಶಕ್ಕೆ ಭಾರೀ ಹಿನ್ನಡೆಯಾಗಿದೆ. ಬಾಂಗ್ಲಾದ ಮನವಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತಿರಸ್ಕರಿಸಿದ್ದು, ವಿಶ್ವಕಪ್ ನಿಗದಿಯಂತೆ ನಡೆಯಲಿದೆ ಎಂದು ಬುಧವಾರ ದೃಢಪಡಿಸಿದೆ.

ವೀಡಿಯೊ ಕಾನ್ಫರೆನ್ಸ್ ಮೂಲಕ ನಡೆದ ಐಸಿಸಿ ಮಂಡಳಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಫೆಬ್ರುವರಿ 7ರಂದು ಟಿ20 ವಿಶ್ವಕಪ್ ಆರಂಭವಾಗಲಿದೆ.

ಐಸಿಸಿ ಮತ್ತು ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ ನಡುವೆ ಶನಿವಾರ ಮಾತುಕತೆ ನಡೆದರೂ, ಕಗ್ಗಂಟಿಗೆ ಪರಿಹಾರ ದೊರೆತಿರಲಿಲ್ಲ. ಹೀಗಾಗಿ ಐಸಿಸಿ, ಟೂರ್ನಿಯಲ್ಲಿ ಭಾಗವಹಿಸುವುದಕ್ಕೆ ಸಂಬಂಧಿಸಿ 21ರ ಒಳಗೆ ನಿರ್ಧಾರಕ್ಕೆ ಬರಬೇಕು. ಇಲ್ಲದೇ ಹೋದರೆ ಬದಲಿಯಾಗಿ ಬೇರೆ ತಂಡದ ಆಯ್ಕೆಗೆ ಸಿದ್ಧವಾಗಿರಿ’ ಎಂದು ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿಗೆ ಸೂಚಿಸಿತ್ತು. ಅದರಂತೆ ಬುಧವಾರ ಐಸಿಸಿ ತನ್ನ ಅಂತಿಮ ನಿರ್ಧಾರವನ್ನು ಪ್ರಕಟಿಸಿದೆ. ಎಲ್ಲಾ ಬೇಡಿಕೆಗಳನ್ನು ತಿರಸ್ಕರಿಸಿದ್ದು 24 ಗಂಟೆಯೊಳಗೆ ನಿರ್ಧಾರ ತೆಗೆದುಕೊಳ್ಳುವಂತೆ ಅಂತಿಮ ಗಡುವು ನೀಡಿದೆ.

ದೇಶದ ಯಾವುದೇ ಪಂದ್ಯಾವಳಿ ಸ್ಥಳಗಳಲ್ಲಿ ಬಾಂಗ್ಲಾದೇಶ ಆಟಗಾರರು, ಮಾಧ್ಯಮ ಸಿಬ್ಬಂದಿ, ಅಧಿಕಾರಿಗಳು ಮತ್ತು ಅಭಿಮಾನಿಗಳಿಗೆ ಯಾವುದೇ ಬೆದರಿಕೆ ಇಲ್ಲ ಎಂದು ಸೂಚಿಸಿದ ಸ್ವತಂತ್ರ ವಿಮರ್ಶೆಗಳು ಸೇರಿದಂತೆ ಎಲ್ಲಾ ಭದ್ರತಾ ಮೌಲ್ಯಮಾಪನಗಳನ್ನು ಪರಿಶೀಲಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ತನ್ನ ಯಾವುದೇ ಬೇಡಿಕೆಯನ್ನೂ ಐಸಿಸಿ ಒಪ್ಪದಿರುವ ಹಿನ್ನೆಲೆಯಲ್ಲಿ ಬಾಂಗ್ಲಾಗೆ ಸದ್ಯ ಈಗ ಉಳಿದಿರುವ ಏಕೈಕ ಆಯ್ಕೆ ಏನೆಂದರೆ ಭಾರತದಲ್ಲೇ ತನ್ನ ಪಂದ್ಯಗಳನ್ನು ಆಡುವುದು. ತಪ್ಪಿದರೆ ತಂಡ ಟೂರ್ನಿಯಿಂದ ಹೊರಬೀಳುವುದು ಬಹುತೇಕ ಖಚಿತ.

2026ರ ಟಿ20 ವಿಶ್ವಕಪ್‌ನಲ್ಲಿ ತನ್ನ ಪಂದ್ಯಗಳನ್ನು ಆಡಲು ಭಾರತಕ್ಕೆ ಬಾಂಗ್ಲಾದೇಶವು ಪ್ರಯಾಣಿಸಲು ನಿರಾಕರಿಸುವುದನ್ನು ಮುಂದುವರಿಸಿದರೆ, ಬದಲಿ ತಂಡವನ್ನು ಪಂದ್ಯಾವಳಿಯಲ್ಲಿ ಸೇರಿಸಲಾಗುವುದು ಎಂದು ಐಸಿಸಿ ಹೇಳಿದೆ. ಮತದಾನದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಯಿತು. ಇದರಲ್ಲಿ ಐಸಿಸಿ ಮಂಡಳಿಯ ಬಹುಪಾಲು ಸದಸ್ಯರು ಬದಲಿ ತಂಡದ ಪರವಾಗಿ ಮತ ಚಲಾಯಿಸಿದರು. ಭಾರತದಲ್ಲಿ ಆಡುವ ಬಗ್ಗೆ ಐಸಿಸಿ ತನ್ನ ನಿಲುವಿಗೆ ಪ್ರತಿಕ್ರಿಯಿಸಲು ಬಿಸಿಬಿಗೆ ಇನ್ನೂ ಒಂದು ದಿನದ ಕಾಲಾವಕಾಶ ನೀಡಲಾಗಿದೆ. ಬಾಂಗ್ಲಾದೇಶ ಭಾಗವಹಿಸದಿದ್ದರೆ, ಸ್ಕಾಟ್ಲೆಂಡ್ ಅನ್ನು ವಿಶ್ವಕಪ್ ಸ್ಥಾನಕ್ಕೆ ಪರಿಗಣಿಸಬಹುದು ಎಂದು ಸೂಚಿಸುವ ವರದಿಯೊಂದು ಹೊರಬಿದ್ದಿದೆ.

Must Read