ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಡವಿ ಮಕ್ಕಳನ್ನು ಶೈಕ್ಷಣಿಕವಾಗಿ ಬಲಿಷ್ಠಗೊಳಿಸಿ ಸಮಾಜದ ಮುನ್ನೆಲೆಗೆ ತರುವುದಕ್ಕಾಗಿ ತಮ್ಮ ‘ವನಚೇತನಾ’ ಕಾರ್ಯಕ್ರಮದ ಮೂಲಕ ಸತತ ಶ್ರಮ ವಹಿಸುತ್ತಿರುವ ಪರಿಸರವಾದಿ, ಕಲಾವಿದ ಮಂಗಳೂರಿನ ದಿನೇಶ್ ಹೊಳ್ಳ, ಈಗ ಅದೇ ಅಡವಿ ಮಕ್ಕಳಲ್ಲಿ ಅಡಗಿರುವ ಚಿತ್ರ ಕಲಾ ಪ್ರತಿಭೆ ಹೊರತರುವುದರ ಜೊತೆಗೆ ಅಳಿವಿನಂಚಿನಲ್ಲಿರುವ ಮಂಗಟ್ಟೆ (ಹಾರ್ನ್ ಬಿಲ್ ) ಹಕ್ಕಿಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಹೊಸ ಕಾರ್ಯಕ್ಕೆ ಮುಂದಾಗಿದ್ದಾರೆ.

ಅಡವಿ ಮಕ್ಕಳು ಹಾಗೂ ಅವರ ಪೋಷಕರಲ್ಲಿ ಹಾರ್ನ್ ಬಿಲ್ ಹಕ್ಕಿಗಳ ಸಂರಕ್ಷಣೆ ಬಗ್ಗೆ ವನಚೇತನಾ ಈಗಾಗಲೇ ಜಾಗೃತಿ ಮೂಡಿಸುತ್ತಿದೆ. ಇದರ ಮುಂದುವರಿದ ಭಾಗವಾಗಿ ಈ ಹಕ್ಕಿಗಳ ಮೇಲೆ ಮಕ್ಕಳಿಗೆ ಇನ್ನಷ್ಟು ಪ್ರೀತಿ ಮೂಡಿಸುವ ಉದ್ದೇಶದಿಂದ ಎಲ್ಲಾಪುರ, ಜೋಯಿಡಾ, ಅಂಕೋಲಾ ಪರಿಸರದ ಅಡವಿಯ ಬುಡಕಟ್ಟು ಶಾಲಾ ಮಕ್ಕಳಲ್ಲಿ ತಾವು ತಾವು ಕಂಡ ಹಾರ್ನ್ ಬಿಲ್ ಹಕ್ಕಿಯ ಚಿತ್ರ ರಚಿಸಲು ಹೇಳಲಾಗಿದ್ದು, ಅವರು ರಚಿಸಿದ ಚಿತ್ರಗಳಲ್ಲಿ ಆಯ್ಕೆಯಾಗಿರುವ 72 ಚಿತ್ರಗಳನ್ನು ಮೌಂಟ್, ಫ್ರೆಮ್ ಜೊತೆಗೆ ಜ.24 ರಿಂದ ಮಂಗಳೂರಿನ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ‘ ಕಾನುಕುಂಜ ‘ ಎಂಬ ಹೆಸರಿನಲ್ಲಿ ಪ್ರದರ್ಶನ ಮಾಡಲಾಗುತ್ತಿದೆ.

ಈ ಕಲಾಕೃತಿಗಳಿಗೆ ರೂ.500, ರೂ.750, ರೂ.1000 ದರ ನಿಗದಿ ಮಾಡಲಾಗಿದ್ದು ಖರೀದಿಗೆ ಅವಕಾಶವಿದೆ. ಅಂದಹಾಗೆ ಇದ್ಯಾವುದೂ ಕಮರ್ಷಿಯಲ್ ವ್ಯವಹಾರ ಅಲ್ಲವೇ ಅಲ್ಲ. ಈ ಕಲಾಕೃತಿಗಳನ್ನು ಇಷ್ಟ ಪಟ್ಟು ಖರೀದಿಸಿದರೆ ಆ ಹಣವನ್ನು ಒಂದು ಆರ್ಟ್ ಕಿಟ್, ಅಭಿನಂದನಾ ಪತ್ರ ಸಹಿತ ಆ ಚಿತ್ರ ರಚಿಸಿದ ಮಗುವಿಗೆ ನೇರ ನೀಡಲಾಗುತ್ತಿದೆ. ಇದರಿಂದ ಆ ಮಕ್ಕಳು ಮುಂದಿನ ದಿನಗಳಲ್ಲಿ ಮಂಗಟ್ಟೆ ಹಕ್ಕಿಯ ಚಿತ್ರ ರಚಿಸುವ ಆಸಕ್ತಿಯ ಜೊತೆಗೆ ಮಂಗಟ್ಟೆ ಹಕ್ಕಿ ಮತ್ತು ಮಕ್ಕಳ ನಡುವೆ ಸ್ನೇಹ, ಒಡನಾಟ ಬೆಳೆಯಲು ಪ್ರೋತ್ಸಾಹ ನೀಡಿದಂತಾಗುತ್ತದೆ, ಜೊತೆಗೆ ಪೋಷಕರ ಸಹಿತ ಮಂಗಟ್ಟೆ ಹಕ್ಕಿ ಸಂರಕ್ಷಣೆಯ ಬಗ್ಗೆ ವಿದ್ಯಾರ್ಥಿ – ವಿದ್ಯಾರ್ಥಿನಿಯರೇ ಕಾಳಜಿ ವಹಿಸುತ್ತಾರೆ ಎಂಬುದು ಈ ಕಲಾ ಪ್ರದರ್ಶನದ ಉದ್ದೇಶ.
ಜ.24 ರಂದು ಸಂಜೆ 5 ಗಂಟೆಗೆ ಪಕ್ಷಿಪ್ರೇಮಿ, ಛಾಯಾಗ್ರಾಹಕ, ಶಿಕ್ಷಕ ಅರವಿಂದ ಕುಡ್ಲ ಅವರು ಪ್ರದರ್ಶನ ಉದ್ಘಾಟಿಸಲಿದ್ದಾರೆ. ಕಲಾವಿದ, ನಿವೃತ ಸಸ್ಯ ಶಾಸ್ತ್ರ ಪ್ರಾಧ್ಯಾಪಕ ಅನಂತ ಪದ್ಮನಾಭ ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. ನಾದನೃತ್ಯ ಸ್ಕೂಲ್ ಆಫ್ ಡಾನ್ಸ್ ಮತ್ತು ಕಲ್ಚರಲ್ ಟ್ರಸ್ಟ್ ನಿರ್ದೇಶಕ ಡಾ. ಭ್ರಮರಿ ಶಿವಪ್ರಕಾಶ್, ಅಂಕೋಲಾ ಬೊಗರಿಗದ್ದೆ ಶಾಲೆಯ ಸೃಜನ ನಾಯಕ, ಉಳುವರೇ ಶಾಲೆಯ ಸಂಧ್ಯಾ ನಾಯ್ಕ್, ಎಲ್ಲಾಪುರದ ಸಮಾಜ ಸೇವಕ ರಾಜೇಶ್ವರಿ ಸಿದ್ದಿ ಅತಿಥಿಗಳಾಗಿರುತ್ತಾರೆ. ಸಹ್ಯಾದ್ರಿ ಸಂಚಯ, ವಿದ್ಯಾಗಮ ಟ್ರಸ್ಟ್ ಸುರತ್ಕಲ್ ಇದರ ಸಾರಥ್ಯ ವಹಿಸಿದೆ.
ಪ್ರಸಾದ್ ಆರ್ಟ್ ಗ್ಯಾಲರಿಗೆ ನೀವೂ ಬನ್ನಿ, ಅಡವಿ ಮಕ್ಕಳ ಹಂಬಲಗಳಿಗೆ ನಮ್ಮದೂ ಬೆಂಬಲವಿರಲಿ. ಏನಂತೀರಾ?


