ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಬಿಜೆಪಿ ಸರ್ಕಾರದ ಬುಡವನ್ನೇ ಅಲುಗಾಡಿಸಿದ್ದ ಕಮಿಷನ್ ಆರೋಪದ ಬಿಸಿ ಈಗ ಹಾಲಿ ಕಾಂಗ್ರೆಸ್ ಸರ್ಕಾರಕ್ಕೂ ತಟ್ಟಿದೆ. ಸರ್ಕಾರದೊಂದಿಗೆ ಬಾಕಿ ಇರುವ ಅಂದಾಜು 33,000 ಕೋಟಿ ಮೊತ್ತದ ಹಣ ಬಿಡುಗಡೆಗಾಗಿ ಆಗ್ರಹಿಸಿರುವ ಗುತ್ತಿಗೆದಾರರ ಸಂಘ, ದಿಢೀರ್ ಪತ್ರಿಕಾಗೋಷ್ಠಿ ನಡೆಸಿ ಸರ್ಕಾರಕ್ಕೆ ಖಡಕ್ ಗಡುವು ನೀಡಿದೆ.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ನೇರಾನೇರಾ ಅವರು, ಮುಂಬರುವ ಡಿಸೆಂಬರ್ ತಿಂಗಳೊಳಗೆ ಬಾಕಿ ಹಣವನ್ನು ಸಂಪೂರ್ಣವಾಗಿ ಬಿಡುಗಡೆ ಮಾಡಬೇಕು ಎಂದು ಸರ್ಕಾರಕ್ಕೆ ಡೆಡ್‌ಲೈನ್ ವಿಧಿಸಿದ್ದಾರೆ. ಒಂದು ವೇಳೆ ನಿಗದಿತ ಅವಧಿಯಲ್ಲಿ ಹಣ ಬಿಡುಗಡೆ ಮಾಡದಿದ್ದರೆ, ಕಮಿಷನ್ ಕುರಿತು ‘ಎಲ್ಲ ಸತ್ಯವನ್ನೂ’ ಬಹಿರಂಗಪಡಿಸುವುದಾಗಿ ಅವರು ನೇರವಾಗಿ ಎಚ್ಚರಿಸಿದ್ದಾರೆ.
“ಈ ಸರ್ಕಾರದಲ್ಲಿ ಕಮಿಷನ್ ಇಲ್ಲ ಎಂದು ನಾನು ಹೇಳುವುದಿಲ್ಲ,” ಎಂದು ಸ್ಪಷ್ಟಪಡಿಸಿದ ಮಂಜುನಾಥ, “ನಾವು ಎಲ್ಲವನ್ನೂ ಬಹಿರಂಗಪಡಿಸಿದರೆ ಮುಖ್ಯಮಂತ್ರಿಗಳೇ ಮುಂದೆ ಕಷ್ಟವಾಗಲಿದೆ,” ಎಂದೂ ಗುಡುಗಿದ್ದಾರೆ. ಗಡುವು ಮೀರಿದರೆ, ಈ ಎಲ್ಲಾ ಮಾಹಿತಿಗಳೊಂದಿಗೆ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಸತ್ಯಾಂಶವನ್ನು ಅವರ ಮುಂದಿಡುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.
ಈ ಬೆಳವಣಿಗೆಯು ಆಡಳಿತರೂಢ ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದ್ದು, ಗುತ್ತಿಗೆದಾರರ ಬಾಕಿ ಬಿಲ್ ಪಾವತಿ ವಿವಾದ ಮತ್ತೊಮ್ಮೆ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ.