ಹೊಸದಿಗಂತ ಹುಬ್ಬಳ್ಳಿ:
ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ಅವರ ಬಂಧನ ಮತ್ತು ಆ ಬಳಿಕ ನಡೆದ ಬೆಳವಣಿಗೆಗಳು ಹುಬ್ಬಳ್ಳಿಯಲ್ಲಿ ಸಂಚಲನ ಮೂಡಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ಮಹತ್ವದ ಆದೇಶಗಳನ್ನು ಹೊರಡಿಸಿದ್ದಾರೆ.
ಸುಜಾತಾ ಹಂಡಿ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳ ಸಮಗ್ರ ತನಿಖೆಗಾಗಿ ಎಸಿಪಿ ಶಿವರಾಜ್ ಕಟಕಬಾವಿ ಅವರನ್ನು ವಿಶೇಷ ತನಿಖಾಧಿಕಾರಿಯಾಗಿ ನೇಮಿಸಲಾಗಿದೆ. ಇವರು ಪ್ರಕರಣದ ಪ್ರತಿಯೊಂದು ಮಗ್ಗುಲನ್ನು ತನಿಖೆ ನಡೆಸಿ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಮಹಾನಿಂಗ ನಂದಗಾವಿ ಅವರಿಗೆ ಶೀಘ್ರವಾಗಿ ವರದಿ ಸಲ್ಲಿಸಬೇಕೆಂದು ಸೂಚಿಸಲಾಗಿದೆ.
ಸುಜಾತಾ ಹಂಡಿ ಅವರನ್ನು ವಶಕ್ಕೆ ಪಡೆಯುವ ಸಂದರ್ಭದಲ್ಲಿ ಅಸಭ್ಯವಾಗಿ ವರ್ತಿಸಿದ್ದಾರೆ ಮತ್ತು ದೌರ್ಜನ್ಯ ಎಸಗಿದ್ದಾರೆ ಎಂಬ ಗಂಭೀರ ಆರೋಪ ಕೇಶ್ವಾಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎಸ್.ಕೆ. ಹಟ್ಟಿ ಅವರ ಮೇಲೆ ಕೇಳಿಬಂದಿತ್ತು. ಈ ವಿಚಾರವಾಗಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿ, ಅವರ ಅಮಾನತಿಗೆ ಒತ್ತಾಯಿಸಿದ್ದರು. ಸದ್ಯ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಇನ್ಸ್‌ಪೆಕ್ಟರ್ ಹಟ್ಟಿ ಅವರನ್ನು ಪೊಲೀಸ್ ಆಯುಕ್ತರ ಕಚೇರಿಗೆ ವರ್ಗಾಯಿಸಲಾಗಿದೆ.
ಕೇಶ್ವಾಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸ್ಥಾನ ಸದ್ಯ ತೆರವಾಗಿದ್ದು, ಘಂಟಿಕೇರಿ ಠಾಣೆಯ ಇನ್ಸ್‌ಪೆಕ್ಟರ್ ಜಾಧವ್ ಅವರಿಗೆ ಕೇಶ್ವಾಪುರ ಠಾಣೆಯ ಹೆಚ್ಚುವರಿ ಉಸ್ತುವಾರಿಯನ್ನು ವಹಿಸಿಕೊಡಲಾಗಿದೆ.
ಈ ಕ್ರಮಗಳ ಮೂಲಕ ಪೊಲೀಸ್ ಇಲಾಖೆಯು ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಮುಂದಾಗಿದ್ದು, ನಗರದಲ್ಲಿ ಉಂಟಾಗಿದ್ದ ಬಿಗುವಿನ ವಾತಾವರಣವನ್ನು ತಿಳಿಗೊಳಿಸಲು ಪ್ರಯತ್ನಿಸಿದೆ.

