Thursday, September 18, 2025

ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌: ಚಿನ್ನ ಗೆದ್ದು ದಾಖಲೆ ಬರೆದ ಮೀರಾಬಾಯಿ ಚಾನು!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮೀರಾಬಾಯಿ ಚಾನು ಹೊಸ ದಾಖಲೆಗಳನ್ನು ಬರೆಯುವ ಮೂಲಕ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ.

ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಮಹಿಳೆಯರ 48 ಕೆಜಿ ತೂಕ ವಿಭಾಗದಲ್ಲಿ ಒಟ್ಟು 193 ಕೆಜಿ (84 ಕೆಜಿ + 109 ಕೆಜಿ) ಎತ್ತಿ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟು ಸ್ನ್ಯಾಚ್ ಮತ್ತು ಕ್ಲೀನ್ ಮತ್ತು ಜರ್ಕ್ ದಾಖಲೆಗಳನ್ನು ಮುರಿದು ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ.

ರಾಷ್ಟ್ರೀಯ ಕ್ರೀಡಾಕೂಟದ ಚಾಂಪಿಯನ್ ರಿಷಿಕಾಂತ್ ಸಿಂಗ್ ಪುರುಷರ 60 ಕೆಜಿ ವಿಭಾಗದಲ್ಲಿ ಒಟ್ಟು 271 ಕೆಜಿ (120 ಕೆಜಿ + 151 ಕೆಜಿ) ಭಾರ ಎತ್ತುವ ಮೂಲಕ ದಿನದ ಎರಡನೇ ಚಿನ್ನದ ಪದಕವನ್ನು ಗೆದ್ದರು.

ಕಳೆದ ವರ್ಷ ಆಗಸ್ಟ್‌ನಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ನಂತರ ಮೀರಾಬಾಯಿ ಮೊದಲ ಬಾರಿ ಸ್ಪರ್ಧೆಯಲ್ಲಿ ಭಾಗವಹಿಸಿದರು. ಅವರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು. ಗಾಯದಿಂದಾಗಿ ದೀರ್ಘಕಾಲ ಹೊರಗುಳಿದ ನಂತರ, 37ರ ವಯಸ್ಸಿನ ಅವರು ಲಯವನ್ನು ಮರಳಿ ಪಡೆಯಲು ಸಮಯ ತೆಗೆದುಕೊಂಡರು.

ಕಾಮನ್‌ವೆಲ್ತ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಬಳಿಕ ಮಾತನಾಡಿದ ಮೀರಾಬಾಯಿ ಚಾನು, ‘ಇಲ್ಲಿ ಚಿನ್ನದ ಪದಕ ಗೆದ್ದಿರುವುದು ನನಗೆ ನಿಜಕ್ಕೂ ಸಂತೋಷ ತಂದಿದೆ, ಏಕೆಂದರೆ ಇದು ಒಲಿಂಪಿಕ್ಸ್ ನಂತರ ನನ್ನ ಮೊದಲ ಅಂತಾರಾಷ್ಟ್ರೀಯ ಟೂರ್ನಿಯಾಗಿದೆ, ಅದೂ 48 ಕೆಜಿ ವಿಭಾಗದಲ್ಲಿ. ಈ ತೂಕ ವಿಭಾಗದಲ್ಲಿ ನಾನು ಮಾಡಿದ ರೀತಿಯಲ್ಲಿ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆಯೇ ಎಂದು ನನಗೆ ಸಂದೇಹವಿತ್ತು. ಈ ಗೆಲುವು ಅಕ್ಟೋಬರ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ಗಾಗಿ ನನ್ನ ಮನೋಸ್ಥೈರ್ಯವನ್ನು ಹೆಚ್ಚಿಸುತ್ತದೆ’ ಎಂದು ಹೇಳಿದ್ದಾರೆ. 

ಇದನ್ನೂ ಓದಿ