ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದಿನ ವೇಗದ ಜೀವನದಲ್ಲಿ ವೃದ್ಧರ ಆರೈಕೆಯು ಕೆಲವರಿಗೆ ಬಾಧ್ಯತೆಯಂತೆ ತೋರುತ್ತಿದೆ. ಆದರೆ, ಇನ್ನೂ ಈ ಜಗತ್ತಿನಲ್ಲಿ ಕರುಣೆ ಮತ್ತು ಮಾನವೀಯತೆಯ ಅರ್ಥ ಗೊತ್ತಿರುವವರು ಇದ್ದಾರೆ ಎಂಬುದಕ್ಕೆ ಸೌದಿಯಾ ಏರ್‌ಲೈನ್ಸ್‌ನ ಒಂದು ಹೃದಯ ಸ್ಪರ್ಶಿ ಘಟನೆ ಸಾಕ್ಷಿಯಾಗಿದೆ.
ಸೌದಿಯಾ ಏರ್‌ಲೈನ್ಸ್‌ನ ಕ್ಯಾಬಿನ್ ಸಿಬ್ಬಂದಿಯೊಬ್ಬರು ಫ್ಲೈಟ್‌ನಲ್ಲಿ ಪ್ರಯಾಣಿಸುತ್ತಿದ್ದ ವಯಸ್ಸಾದ ಪ್ರಯಾಣಿಕರಿಗೆ ತಮ್ಮ ಕೈಯಾರೆ ಊಟ ತಿನ್ನಿಸುತ್ತಿರುವ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಈ ದೃಶ್ಯವನ್ನು ನೋಡಿದವರು ನಿಜವಾದ ಮಾನವೀಯತೆ ಹೇಗಿರಬೇಕು ಎಂಬುದನ್ನು ಮತ್ತೆ ಸ್ಮರಿಸುತ್ತಿದ್ದಾರೆ.
@saudia_aviation ಹೆಸರಿನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಲಾಗಿರುವ ಈ ವಿಡಿಯೋದಲ್ಲಿ, ಫ್ಲೈಟ್ ಅಟೆಂಡೆಂಟ್ ಶಾಂತ ಮುಖಭಾವದಿಂದ ವೃದ್ಧ ವ್ಯಕ್ತಿಗೆ ಚಮಚದಲ್ಲಿ ಆಹಾರ ನೀಡುತ್ತಿರುವುದು ಕಾಣಬಹುದು. ಆ ಕ್ಷಣದಲ್ಲಿ ಅವರ ಆರೈಕೆಯ ಶೈಲಿ, ಪ್ರೀತಿಯ ಸ್ಪರ್ಶ ಹಾಗೂ ಸಹಾನುಭೂತಿಯ ನೋಟ ಜನರ ಮನಸ್ಸನ್ನು ಮುಟ್ಟಿದೆ.
ಅಕ್ಟೋಬರ್ 29 ರಂದು ಹಂಚಿದ ಈ ವಿಡಿಯೋ ಈಗಾಗಲೇ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರ “ಇದು ನಿಜವಾದ ಸೇವಾ ಮನೋಭಾವದ ಉದಾಹರಣೆ” ಎಂದು ಕಾಮೆಂಟ್ ಮಾಡಿದ್ದರೆ, ಮತ್ತೊಬ್ಬರು “ಈ ದೃಶ್ಯ ನನ್ನ ಕಣ್ಣೀರನ್ನು ತಡೆಯಲಿಲ್ಲ” ಎಂದು ಬರೆದಿದ್ದಾರೆ. ಇನ್ನೊಬ್ಬರು “ಇಂತಹ ಮಾನವೀಯ ಕೆಲಸಗಳು ಇಂದಿಗೂ ನಡೆಯುತ್ತಿವೆ ಎಂಬುದೇ ಮನಸ್ಸಿಗೆ ಸಂತೋಷ” ಎಂದು ಹೇಳಿದ್ದಾರೆ.
ಈ ಘಟನೆ ಮೂಲಕ ಒಂದು ಸರಳ ಕೃತ್ಯವೂ ಎಷ್ಟು ದೊಡ್ಡ ಪ್ರಭಾವ ಬೀರಬಹುದು ಎಂಬುದನ್ನು ಮತ್ತೆ ಸಾಬೀತುಪಡಿಸಿದೆ. ವಯಸ್ಸಾದವರ ಮೇಲೆ ಕಾಳಜಿ ವಹಿಸುವುದು ಕೇವಲ ಕರ್ತವ್ಯವಲ್ಲ, ಅದು ಮಾನವೀಯತೆಯ ನಿಜವಾದ ಅರ್ಥ ಎಂದು ಈ ದೃಶ್ಯ ಎಲ್ಲರಿಗೂ ನೆನಪಿಸಿದೆ.

