ಹೊಸದಿಗಂತ ಡಿಜಿಟಲ್ ಡೆಸ್ಕ್:
ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ.ರಾಯ್ (C.J. Roy) ಪಿಸ್ತೂಲ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಬೆಂಗಳೂರಿನ ಹೊಸೂರು ರಸ್ತೆಯ ಲ್ಯಾಂಗ್ಫೋರ್ಡ್ ಟೌನ್ನಲ್ಲಿರುವ ಕಚೇರಿಯಲ್ಲಿ ನಡೆದಿದೆ.
ಇಂದು ಅವರ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು. ಇದರ ಬೆನ್ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಈ ಹಿಂದೆ ಹಲವು ಬಾರಿ ಆದಾಯ ತೆರಿಗೆ ಇಲಾಖೆಯಿಂದ ಕಾನ್ಫಿಡೆಂಟ್ ಗ್ರೂಪ್ನ ಕಚೇರಿಗಳು ಮತ್ತು ಸಿ.ಜೆ ರಾಯ್ ಅವರ ನಿವಾಸದ ಮೇಲೆ ದಾಳಿ ನಡೆದಿತ್ತು. ಪದೇಪದೆ ಐಡಿ ದಾಳಿಯಿಂದ ಖಿನ್ನತೆಗೊಳಗಾಗಿದ್ದ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಗುರುವಾರ ಬೆಳಗ್ಗೆ ಕೂಡ ಐಟಿ ದಾಳಿ ವೇಳೆ ಸುಮಾರು ಒಂದು ಗಂಟೆ ಕಾಲ ಉದ್ಯಮಿ ವಿಚಾರಣೆ ಎದುರಿಸಿದ್ದರು. ಮತ್ತಷ್ಟು ದಾಖಲೆ ತರಲು ರೂಮ್ಗೆ ತೆರಳಿದ್ದ ವೇಳೆ ಪಿಸ್ತೂಲ್ನಿಂದ ಗುಂಡು ಹಾರಿಸಿಕೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲು ಮುಂದಾದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಕಾನ್ಫಿಡೆಂಟ್ ಗ್ರೂಪ್ನ ಅಂಗಸಂಸ್ಥೆಯಾದ ‘ಕಾನ್ಫಿಡೆಂಟ್ ಪ್ರಾಜೆಕ್ಟ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್’ ತೆರಿಗೆ ಪಾವತಿಯ ವಿಳಂಬಕ್ಕೆ ಸಂಬಂಧಿಸಿ ಈ ಹಿಂದೆ ಕಾನೂನು ಹೋರಾಟ ನಡೆಸಿದ್ದು, 2021ರಲ್ಲಿ ಹೈಕೋರ್ಟ್ ಆ ಪ್ರಕರಣದಲ್ಲಿ ಇಲಾಖೆಯ ಪ್ರಾಸಿಕ್ಯೂಷನ್ ಕ್ರಮವನ್ನು ಅಸಿಂಧುಗೊಳಿಸಿತ್ತು.
ಬೆಂಗಳೂರಿನಲ್ಲಿ ನೆಲೆಸಿರುವ ರಾಯ್ ಮೂಲತಃ ಕೇರಳದವರು. ಸ್ವಿಟ್ಜರ್ಲೆಂಡ್ನ ಎಸ್ಬಿಎಸ್ ಬ್ಯುಸಿನೆಸ್ ಸ್ಕೂಲ್ನಲ್ಲಿ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಎಚ್ಪಿ ನಂತಹ ಕೆಲವು ಕಂಪನಿಗಳಲ್ಲಿ ಕೆಲಸ ಮಾಡಿದ್ದ ರಾಯ್ ಬಳಿಕ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಕಾಲಿಟ್ಟಿದ್ದರು. 2006ರಲ್ಲಿ ಕಾನ್ಫಿಡೆಂಟ್ ಗ್ರೂಪ್ ಅನ್ನು ಸ್ಥಾಪಿಸಿದ್ದರು.



