ಹೊಸದಿಗಂತ ವರದಿ ಬೀದರ್:
ಕಳೆದ ವರ್ಷ ಸಾಲ ಮರುಪಾವತಿ ಮಾಡಲು ತಡವಾಗಿದೆ ಎಂದು ಕಾರಣ ಹೇಳಿ ಜಿಲ್ಲಾ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯವರು ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಮುಟ್ಟುಗೋಲು ಮಾಡಿ ಹರಾಜು ಪ್ರಕ್ರಿಯೆ ನಡೆಸಲು ಮುಂದಾಗಿದ್ದರು. ಆದರೆ ಸಹಕಾರಿ ನಿಯಮಾವಳಿ ಪ್ರಕಾರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಮಾರಾಟ ಮಾಡಲು ಆಗಲಿಲ್ಲ. ಇತ್ತ ಕಾರ್ಖಾನೆ ಮುಚ್ಚಿರುವ ಕಾರಣ ಬಿ.ಎಸ್.ಎಸ್.ಕೆ ಶೇರುದಾರ ರೈತರು ಸಂಕಷ್ಟದಲ್ಲಿದ್ದಾರೆ. ನವೆಂಬರ್ ತಿಂಗಳಲ್ಲಿ ಕಬ್ಬು ನುರಿಸುವ ಕಾರ್ಯ ಆರಂಭವಾಗುತ್ತದೆ ಆದರೆ ಕಾರ್ಖಾನೆ ಮುಚ್ಚಿರುವ ಕಾರಣ ಕಬ್ಬು ಬೆಳೆಗಾರ ರೈತರು ಆರ್ಥಿಕವಾಗಿ ದಿವಾಳಿಯಾಗಿದ್ದಾರೆ. ಕಾರ್ಖಾನೆಯೆ ಜೀವಾಳವಾಗಿದ್ದ ಕಾರ್ಮಿಕರು ಬೀದಿಗೆ ಬಂದಿದ್ದಾರೆ.
ಬಿ.ಎಸ್.ಎಸ್.ಕೆ ಕಾರ್ಖಾನೆ ರಾಜಕೀಯದ ಬೆಲೆಗೆ ಸಿಲುಕಿ ನಲುಗುತ್ತಿದೆ. ಬೀದರ್ ಜಿಲ್ಲೆಯಿಂದ ಕ್ಯಾಬಿನೆಟ್ ನಲ್ಲಿ ಇಬ್ಬರು ಸಚಿವರಿದ್ದರೂ ಬೀದರ ಜಿಲ್ಲೆಯ ರೈತರ ಜೀವನಾಡಿ ಸಹಕಾರಿ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಕಿಂಚಿತ್ತೂ ಕಾಳಜಿ ತೋರುತ್ತಿಲ್ಲ. ಸಿಎಂ ಸಿದ್ದರಾಮಯ್ಯ ೨೦೨೩ರಲ್ಲಿ ಅಧಿಕಾರಕ್ಕೆ ಬಂದರೆ ಬಿ.ಎಸ್.ಎಸ್.ಕೆ ಪುನಶ್ಚೇತನಕ್ಕೆ ವಿಶೇಷ ಪ್ಯಾಕೇಜ್ ಕೊಡುವುದಾಗಿ ಘೋಷಣೆ ಮಾಡಿದ್ದರು. ಇದೇ ರೀತಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸಹ ೨೦೨೪ರ ಸಂಸತ್ ಚುನಾವಣೆ ವೇಳೆ ತಮ್ಮ ಮಗನಾದ ಸಂಸದ ಸಾಗರ ಖಂಡ್ರೆಯನ್ನು ಗೆಲ್ಲಿಸಿದರೆ ಬಿ.ಎಸ್.ಎಸ್.ಕೆ ಕಾರ್ಖಾನೆ ಪುನಶ್ಚೇತನ ಮಾಡಿಸಲು ರಾಜ್ಯ ಸರ್ಕಾರದಿಂದ ಅನುದಾನ ತರುವುದಾಗಿ ಹೇಳಿದ್ದರು.
ಕಾಂಗ್ರೆಸ್ ಪಕ್ಷ ನೀಡಿದ ಆಮೀಷಕ್ಕೆ ಬಲಿಯಾಗಿ ರೈತರೆಲ್ಲರು ಸಾಗರ ಖಂಡ್ರೆ ಅವರನ್ನು ಗೆಲ್ಲಿಸಿದರು. ಸಂಸತ್ ಚುನಾವಣೆ ನಡೆದು ಒಂದೂವರೆ ವರ್ಷ ಕಳೆದಿದೆ. ಬಿ.ಎಸ್.ಎಸ್.ಕೆ ಕುರಿತು ಈ ಬಾರಿಯ ಕ್ಯಾಬಿನೆಟ್ ನಲ್ಲಿ ನಿರ್ಣಯಿಸುತ್ತೇವೆ ಎಂದೇ ಪ್ರತಿ ಕ್ಯಾಬಿನೆಟ್ ಮೀಟಿಂಗ್ ಮುನ್ನ ಬರಿಯ ಖಾಲಿ ಆಶ್ವಾಸನೆ ನೀಡಿದರೆ ಹೊರತು ಯಾವುದೇ ಪ್ಯಾಕೇಜ್ ಬಿಡುಗಡೆ ಆಗಲಿಲ್ಲ. ಸಿಎಂ ಸಿದ್ದರಾಮಯ್ಯ ಹೊದಲ್ಲೆಲ್ಲ ನುಡಿದಂತೆ ನಡೆದಿದ್ದೇವೆ, ರೈತಪರ ಸರ್ಕಾರ ಎಂದು ಜಂಭ ಕೊಚ್ಚಿಕೊಳ್ಳುವ ಅವರ ಹಾಗೂ ಕಾಂಗ್ರೆಸ್ ಸರ್ಕಾರದ ಬಿ.ಎಸ್.ಎಸ್.ಕೆ ಕುರಿತು ನಿಷ್ಕಾಳಜಿಯ ನಿಯತ್ತು ಮತ್ತೋಮ್ಮೆ ಬಹಿರಂಗಗೊಂಡಿದೆ.
ಅಗಸ್ಟ್ ತಿಂಗಳಲ್ಲಿ ಬೀದರ್ ಕಾಮರ್ಸ್ ಚೆಂಬರ್ಸ್ ವತಿಯಿಂದ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ ಪುನಶ್ಚೇತನ ಆದಷ್ಟು ಬೇಗ ಆಗಲಿ, ಪ್ಯಾಕೇಜ್ ಬಿಡುಗಡೆ ಜೊತೆಗೆ ದಕ್ಷವಾದ ಖಾಸಗಿ ಕಂಪನಿಗೆ ಆರಿಸಿ ದೀರ್ಘಾವಧಿ ಲೀಸ್ ಕೊಟ್ಟು ಕಾರ್ಖಾನೆ ಪುನರ್ ಆರಂಭಿಸಿ ಎಂದು ಮನವಿ ಸಲ್ಲಿಸಲು ತೆರಳಿದ್ದ ಚೆಂಬರ್ಸ್ ಪದಾಧಿಕಾರಿಗಳಿಗೆ ಬರುವ ಕ್ಯಾಬಿನೆಟ್ ನಲ್ಲಿ ಪ್ಯಾಕೇಜ್ ಬಿಡುಗಡೆ ಕುರಿತು ನಿರ್ಣಯಿಸುತ್ತೇವೆ, ಸಿಎಂ ಭೇಟಿಯಾಗಲು ಜಿಲ್ಲೆಯ ನಿಯೋಗದೊಡನೆ ಭೇಟಿಯಾಗಿ ಒತ್ತಾಯಿಸುವುದಾಗಿ ಹೇಳಿ ಎರಡು ತಿಂಗಳು ಕಳೆದರೂ ವಸ್ತುಸ್ಥಿತಿ ಹಾಗೆಯೇ ಇದೆ.
ಬಿ.ಎಸ್.ಎಸ್.ಕೆ ಸಂಬಂಧಿಸಿದಂತೆ ಪ್ರಶ್ನೆ ಬಂದಾಗ ಇನ್ನೋರ್ವ ಸಚಿವ ರಹೀಂ ಖಾನ್ ತಮಗೇನು ಗೊತ್ತೇ ಇಲ್ಲ ಎನ್ನುವಂತಿದ್ದರು. ಜಿಲ್ಲೆಯಿಂದ ಇಬ್ಬರೂ ಸಚಿವರಿದ್ದರೂ ಸರ್ಕಾರದ ಮೇಲೆ ಒತ್ತಡ ತರಬೇಕಾದವರಿಂದ ಯಾವುದೇ ಪ್ರಯೋಜನವಾಗಿಲ್ಲ.
ಬಿ.ಎಸ್.ಎಸ್.ಕೆ ಹೆಸರಿನಲ್ಲಿ ಚುನಾವಣೆ ವೇಳೆ ತಮ್ಮ ಬೆಳೆ ಬೇಯಿಸಿಕೊಂಡ ಕಾಂಗ್ರೆಸ್ ಹಾಗೂ ಸಿಎಂ ಸಿದ್ದರಾಮಯ್ಯ, ಸಚಿವ ಈಶ್ವರ ಖಂಡ್ರೆ ಇಂದು ರೈತರ ಸಮಸ್ಯೆ ಕುರಿತು ಮುಖ ತಿರುಗಿಸುತ್ತಿದ್ದಾರೆ.
ಕಾಂಗ್ರೆಸ್ ಸರ್ಕಾರದ ನಿರ್ಲಜ್ಜ ನಿಷ್ಕಾಳಜಿ ಧೋರಣೆಯಿಂದ ಬೆಸತ್ತಿರುವ ರೈತರು ಕಾಂಗ್ರೆಸ್ ಪಕ್ಷದ ನಾಯಕರಿಗೆ ತಕ್ಕ ಪಾಠ ಕಲಿಸುವುದಾಗಿ ಜಿಲ್ಲಾ ರೈತ ಸಂಘದವರು ಎಚ್ಚರಿಸಿದ್ದಾರೆ.