ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಶಾಲಾ ಪ್ರವೇಶ ವಯೋಮಿತಿ ಕುರಿತ ಗೊಂದಲಕ್ಕೆ ಕೊನೆಗೂ ಸ್ಪಷ್ಟತೆ ಸಿಕ್ಕಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿಧಾನಸಭೆಯಲ್ಲಿ ಮಹತ್ವದ ಘೋಷಣೆ ಮಾಡಿದ್ದು, ಒಂದನೇ ತರಗತಿ ಪ್ರವೇಶಕ್ಕೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.
ಇದುವರೆಗೆ ಮೊದಲ ತರಗತಿಗೆ ಸೇರಲು 6 ವರ್ಷ ಪೂರ್ಣಗೊಳ್ಳುವುದು ಕಡ್ಡಾಯವಾಗಿತ್ತು. ಆದರೆ ಈಗ ಸರ್ಕಾರ 60 ದಿನಗಳ ವಿನಾಯಿತಿ ನೀಡಲು ನಿರ್ಧರಿಸಿದೆ. ಅಂದರೆ, 6 ವರ್ಷ 2 ತಿಂಗಳವರೆಗೆ ಇರುವ ಮಕ್ಕಳಿಗೂ ಪ್ರವೇಶ ಅವಕಾಶ ದೊರೆಯಲಿದೆ. ಇದರಿಂದ ವಯಸ್ಸಿನ ಅಂತರದಿಂದ ಪ್ರವೇಶ ಕಳೆದುಕೊಳ್ಳುತ್ತಿದ್ದ ಮಕ್ಕಳಿಗೆ ಸಹಾಯವಾಗಲಿದೆ.
ಇದನ್ನೂ ಓದಿ:
ಈ ಬದಲಾವಣೆಯನ್ನು ಜಾರಿಗೆ ತರಲು ಕರ್ನಾಟಕ ಶಿಕ್ಷಣ ಕಾಯ್ದೆಗೆ ತಿದ್ದುಪಡಿ ತರಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ. ಜೊತೆಗೆ ಶಾಲಾ ದಾಖಲಾತಿ ಪ್ರಕ್ರಿಯೆಯಲ್ಲಿ ಬಳಸುವ ತಂತ್ರಾಂಶದಲ್ಲಿಯೂ ಅಗತ್ಯ ಪರಿಷ್ಕರಣೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಸದನದಲ್ಲಿ ನಡೆದ ಚರ್ಚೆಯಲ್ಲಿ LKG ಮತ್ತು UKG ಪ್ರವೇಶ ಸಮಸ್ಯೆಗಳನ್ನೂ ಎತ್ತಿಹಿಡಿಯಲಾಗಿದ್ದು, ಅವುಗಳಿಗೂ ಪರಿಹಾರ ಕಂಡುಹಿಡಿಯಲು ಸರ್ಕಾರ ಮುಂದಾಗಿದೆ. ಶಾಸಕ ಅರವಿಂದ್ ಬೆಲ್ಲದ್ ಈ ಸಡಿಲಿಕೆಯನ್ನು ಕಾನೂನುಬದ್ಧಗೊಳಿಸಲು ಮನವಿ ಮಾಡಿದರು.
ಒಟ್ಟಿನಲ್ಲಿ, ಈ ನಿರ್ಧಾರದಿಂದ ಸಾವಿರಾರು ಪೋಷಕರ ಆತಂಕ ನಿವಾರಣೆಯಾಗಿದ್ದು, ಮಕ್ಕಳ ಶಿಕ್ಷಣದ ಆರಂಭದಲ್ಲಿ ಎದುರಾಗುತ್ತಿದ್ದ ಪ್ರಮುಖ ಅಡಚಣೆಗೆ ಪರಿಹಾರ ಸಿಕ್ಕಂತಾಗಿದೆ.



