ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರ್ಕಾರವು ಕಾಂಗ್ರೆಸ್ ಭವನಗಳ ನಿರ್ಮಾಣಕ್ಕೆ ಸರ್ಕಾರಿ ಭೂಮಿ ನೀಡುವ ಪ್ರಕ್ರಿಯೆಯನ್ನು ಮುಂದುವರಿಸಿದೆ. ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮತ್ತೆ ನಾಲ್ಕು ಪ್ರದೇಶಗಳಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಲು ಒಪ್ಪಿಗೆ ನೀಡಲಾಗಿದೆ.
ಪ್ರಮುಖವಾಗಿ ಮಂಜೂರಾದ ಜಾಗಗಳ ವಿವರ:
ಮಂಡ್ಯ: ನಗರಾಭಿವೃದ್ಧಿ ಪ್ರಾಧಿಕಾರದ ವಿವೇಕಾನಂದ ಬಡಾವಣೆಯಲ್ಲಿ 1,457 ಚದರ ಮೀಟರ್ ವಿಸ್ತೀರ್ಣದ ನಿವೇಶನವನ್ನು 30 ವರ್ಷಗಳ ಗುತ್ತಿಗೆ ಆಧಾರದ ಮೇಲೆ ನೀಡಲು ಸಂಪುಟ ಸಮ್ಮತಿ ಸೂಚಿಸಿದೆ.
ಇತರೆ ಜಿಲ್ಲೆಗಳು: ಉಡುಪಿಯ ಅಂಜಾರು ಗ್ರಾಮದಲ್ಲಿ 20 ಸೆಂಟ್ಸ್ ಜಾಗ, ಕುಂದಾಪುರದಲ್ಲಿ 11 ಸೆಂಟ್ಸ್ ಜಾಗ ಮತ್ತು ನೆಲಮಂಗಲದಲ್ಲಿ 00.08 ಗುಂಟೆ ಜಾಗವನ್ನು ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಮಂಜೂರು ಮಾಡಲು ಕ್ಯಾಬಿನೆಟ್ ಒಪ್ಪಿಗೆ ನೀಡಿದೆ.
ಸಂಪುಟ ಸಭೆಯ ಇತರ ಪ್ರಮುಖ ನಿರ್ಧಾರಗಳು ಮತ್ತು ಯೋಜನೆಗಳು:
ಕ್ಯಾಬಿನೆಟ್ ಸಭೆಯಲ್ಲಿ ಕಾಂಗ್ರೆಸ್ ಭವನಗಳ ಜಾಗ ಮಂಜೂರಾತಿ ಹೊರತುಪಡಿಸಿ ಹಲವು ಮಹತ್ವದ ಯೋಜನೆಗಳು ಮತ್ತು ನಿರ್ಣಯಗಳಿಗೆ ಅನುಮೋದನೆ ದೊರೆತಿದೆ.
ಗಂಗಾ ಕಲ್ಯಾಣ ಯೋಜನೆ: ಗಂಗಾ ಕಲ್ಯಾಣ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಮಾಡುವ ಹೊಣೆಯನ್ನು ಉಸ್ತುವಾರಿ ಸಚಿವರ ಹೆಗಲಿಗೆ ವಹಿಸಲಾಗಿದೆ.
ಗುತ್ತಿಗೆದಾರರ ಅವಧಿ ವಿಸ್ತರಣೆ: ಹಳೆಯ ಗುತ್ತಿಗೆದಾರರ ಅವಧಿಯನ್ನು 2 ವರ್ಷಗಳ ಕಾಲ ವಿಸ್ತರಿಸಲು ಒಪ್ಪಿಗೆ ನೀಡಲಾಗಿದೆ.
ಕೃಷಿ ಮತ್ತು ಕಡಲ ಯೋಜನೆಗಳು:
ಕೆ-ಶೋರ್ ಯೋಜನೆಯಡಿ 20.47 ಕೋಟಿ ವೆಚ್ಚದ ಹಣ ಬಿಡುಗಡೆ.
ಕರಾವಳಿಯಲ್ಲಿರುವ 4 ಹಾಲಿ ಬಂದರುಗಳ ಖಾಸಗಿ ಸಹಭಾಗಿತ್ವದಲ್ಲಿ ದುರಸ್ತಿಗೆ ಒಪ್ಪಿಗೆ ನೀಡಲಾಗಿದ್ದು, ಇದಕ್ಕಾಗಿ 40.12 ಕೋಟಿ ವೆಚ್ಚಕ್ಕೆ ಕ್ಯಾಬಿನೆಟ್ ಅನುಮೋದನೆ ನೀಡಿದೆ.
ಶಿಕ್ಷಣ ಮತ್ತು ತಂತ್ರಜ್ಞಾನ:
ರಾಜ್ಯಾದ್ಯಂತ 360 ಕೋಟಿ ರೂ ವೆಚ್ಚದಲ್ಲಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಅನುಮೋದನೆ.
ರಾಜ್ಯದಲ್ಲಿ 8 ಕಡೆಗಳಲ್ಲಿ ಟೆಕ್ನಾಲಜಿ ಬ್ಯುಸಿನೆಸ್ ಇನ್‌ಕ್ಯೂಬೇಟರ್ಸ್ ಸ್ಥಾಪನೆಗೆ ಒಪ್ಪಿಗೆ.
ಮಂಡ್ಯ ಕೃಷಿ ವಿಶ್ವವಿದ್ಯಾಲಯಕ್ಕೆ 23 ಕೋಟಿ ಅನುದಾನ ಮಂಜೂರು.
ಇತರೆ ಮಂಜೂರಾತಿಗಳು:
ಅರಣ್ಯ ಇಲಾಖೆಯಲ್ಲಿ ತಾಂತ್ರಿಕ ಹಾಗೂ ನಿರ್ವಹಣೆ ಸೇವೆಗಳಿಗೆ ಒಪ್ಪಿಗೆ.
ಪೊಲೀಸ್ ಇಲಾಖೆಗೆ ವಾಹನ ಖರೀದಿಗೆ 34 ಕೋಟಿ ಅನುದಾನ.
ಕೋಲಾರದಲ್ಲಿ 150 ಟನ್‌ಗಳ ಸಾಮರ್ಥ್ಯದ ಹಸಿ ತ್ಯಾಜ ಘಟಕಕ್ಕೆ ಒಪ್ಪಿಗೆ.
ಗೇಲ್ (GAIL) ಸಂಸ್ಥೆಗೆ 9 ಎಕರೆ 38 ಗುಂಟೆ ಜಾಗವನ್ನು 25 ವರ್ಷಗಳ ಅವಧಿಗೆ ಗುತ್ತಿಗೆ ಮೇಲೆ ನೀಡಲು ಸಮ್ಮತಿ.
ಬನಶಂಕರಿಯಲ್ಲಿರುವ ವೆಂಕಟರಮಣಸ್ವಾಮಿ ದೇವಸ್ಥಾನಕ್ಕೆ 602 ಚದುರ ಅಡಿ ನಿವೇಶನ ಮಂಜೂರು.
ಶಹಾಪುರ ನಗರಸಭೆಯಲ್ಲಿ ಕನಕಭವನ ನಿರ್ಮಾಣಕ್ಕೆ 300 ಚದರ ಮೀಟರ್ ಜಾಗ ಮಂಜೂರು.

