ಹೊಸದಿಗಂತ ಡಿಜಿಟಲ್ ಡೆಸ್ಕ್:
ಗ್ರಾಮೀಣ ಭಾಗದ ಬಡವರ ಜೀವನಾಡಿಯಾಗಿದ್ದ ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ಯನ್ನು ‘ವಿಕ್ಷಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಆಜೀವಿಕಾ ಮಿಷನ್ (ಗ್ರಾಮೀಣ)’ ಎಂದು ಮರುನಾಮಕರಣ ಮಾಡಿರುವುದನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷವು ದೇಶಾದ್ಯಂತ ಮೂರು ಹಂತದ ಬೃಹತ್ ಆಂದೋಲನವನ್ನು ಘೋಷಿಸಿದೆ.
ಇಂದು ದೆಹಲಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ಹಿರಿಯ ನಾಯಕ ಜೈರಾಂ ರಮೇಶ್ ಈ ಹೋರಾಟದ ನೀಲನಕ್ಷೆಯನ್ನು ಪ್ರಕಟಿಸಿದರು.
ಕಾಂಗ್ರೆಸ್ ಈ ಆಂದೋಲನಕ್ಕೆ ‘ನರೇಗಾ ಬಚಾವೋ ಸಂಗ್ರಾಮ’ ಎಂದು ಹೆಸರಿಟ್ಟಿದ್ದು, ಕೆಳಗಿನ ಹಂತಗಳಲ್ಲಿ ಪ್ರತಿಭಟನೆ ನಡೆಯಲಿದೆ:
ಮೊದಲ ಹಂತ (ಜನವರಿ 8 – ಜನವರಿ 11): ಜನವರಿ 8 ರಿಂದ ರಾಜ್ಯ ಘಟಕಗಳಲ್ಲಿ ಸಿದ್ಧತಾ ಸಭೆಗಳು ನಡೆಯಲಿದ್ದು, ಜನವರಿ 10 ರಂದು ಜಿಲ್ಲಾ ಕೇಂದ್ರಗಳಲ್ಲಿ ಸುದ್ದಿಗೋಷ್ಠಿ ಹಾಗೂ ಜನವರಿ 11 ರಂದು ಗಾಂಧಿ ಮತ್ತು ಅಂಬೇಡ್ಕರ್ ಪ್ರತಿಮೆಗಳ ಮುಂದೆ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಯಲಿದೆ.
ಎರಡು ಮತ್ತು ಮೂರನೇ ಹಂತ: ಪಂಚಾಯತ್ ಮಟ್ಟದಲ್ಲಿ ‘ಚೌಪಾಲ್’ಗಳ ಆಯೋಜನೆ, ಕರಪತ್ರ ವಿತರಣೆ ಮತ್ತು ಜನವರಿ 30 ರಂದು ವಾರ್ಡ್ ಮಟ್ಟದಲ್ಲಿ ಧರಣಿ ನಡೆಯಲಿದೆ. ಫೆಬ್ರವರಿ ತಿಂಗಳಲ್ಲಿ ವಿಧಾನಸಭಾ ಮುತ್ತಿಗೆ ಮತ್ತು ವಲಯ ಮಟ್ಟದ ಬೃಹತ್ ರ್‍ಯಾಲಿಗಳನ್ನು ಹಮ್ಮಿಕೊಳ್ಳಲಾಗಿದೆ.

