ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಆಡಳಿತದಲ್ಲಿ ದಿನಬಳಕೆಯ ವಸ್ತುಗಳು, ಆಹಾರ ಮತ್ತು ಔಷಧಿಗಳಂತಹ ಪ್ರತಿಯೊಂದಕ್ಕೂ ತೆರಿಗೆ ವಿಧಿಸಲಾಗಿತ್ತು ಎಂದು ವಿರೋಧ ಪಕ್ಷ ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ
ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ಸರಳೀಕರಣದ ಬಳಿಕ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, “ಕಾಂಗ್ರೆಸ್ ಮಕ್ಕಳು ತಿನ್ನುವ ಚಾಕೊಲೇಟ್‌ಗಳ ಮೇಲೂ ತೆರಿಗೆ ಹಾಕಿತ್ತು,” ಎಂದು ಹೇಳಿದರು.
ಈ ದೀಪಾವಳಿಯು ದೇಶದ ಜನರಿಗೆ ಡಬಲ್ ಧಮಾಕಾ ತರಲಿದೆ ಎಂದು ನಾನು ಭರವಸೆ ನೀಡಿದ್ದೆ. ನವರಾತ್ರಿಯ ಮೊದಲ ದಿನದಿಂದಲೇ ಜನರಿಗೆ ಇದರ ಪ್ರಯೋಜನಗಳು ಲಭ್ಯವಾಗಲಿವೆ. ಈ ಬಾರಿ, ಧನತೇರಸ್ ಇನ್ನಷ್ಟು ಕಳೆಗಟ್ಟಲಿದೆ. ಇದು ಸ್ವತಂತ್ರ ಭಾರತದ ಅತಿದೊಡ್ಡ ಸುಧಾರಣೆಯಾಗಿದೆ ಎಂದು ಬಣ್ಣಿಸಿದರು.
ಜಿಎಸ್‌ಟಿ ಮಂಡಳಿಯು ಬುಧವಾರ ಘೋಷಿಸಿದ ತೆರಿಗೆ ದರಗಳ ಸರಳೀಕರಣದ ಅಡಿಯಲ್ಲಿ, ಆಹಾರ, ಔಷಧಿಗಳು, ಅಗತ್ಯ ವಸ್ತುಗಳು, ಕೃಷಿ ಉತ್ಪನ್ನಗಳು, ಹಸಿರು ಇಂಧನ, ಸಣ್ಣ ಕಾರುಗಳು ಮತ್ತು ಬೈಕ್‌ಗಳು ಸೇರಿದಂತೆ ಅನೇಕ ವಸ್ತುಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸಲಾಗಿದೆ.ಜೀವ ವಿಮೆ, ವೈದ್ಯಕೀಯ ವಿಮೆ, ಜೀವ ರಕ್ಷಕ ಔಷಧಿಗಳು ಹಾಗೂ ಹಾಲಿನ ಉತ್ಪನ್ನಗಳು ಮತ್ತು ಬ್ರೆಡ್‌ನಂತಹ ಪ್ರಮುಖ ಆಹಾರ ಪದಾರ್ಥಗಳನ್ನು ಸಂಪೂರ್ಣವಾಗಿ ತೆರಿಗೆ ಮುಕ್ತಗೊಳಿಸಲಾಗಿದೆ.