ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕೇಂದ್ರ ಸರ್ಕಾರದ 15ನೇ ಹಣಕಾಸು ಆಯೋಗದ ಅನುದಾನ ಹಂಚಿಕೆಯಲ್ಲಿ ಬೃಹತ್ ಅಕ್ರಮ ನಡೆದಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ನೇರ ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರದಿಂದ ಗ್ರಾಮ ಪಂಚಾಯತ್‌ಗಳ ಅಭಿವೃದ್ಧಿಗಾಗಿ ಬಂದಿದ್ದ ಒಟ್ಟು 6,000 ಕೋಟಿ ರೂ. ಅನುದಾನದಲ್ಲಿ ಸುಮಾರು 5,500 ಕೋಟಿ ರೂ.ಗಳನ್ನು ನಿಯಮಬಾಹಿರವಾಗಿ ಹಂಚಿಕೆ ಮಾಡಲಾಗಿದೆ.
ನಿಯಮದ ಪ್ರಕಾರ ಆಯಾ ಗ್ರಾಮ ಪಂಚಾಯತ್‌ಗಳಿಗೆ ನೇರವಾಗಿ ತಲುಪಬೇಕಿದ್ದ ಹಣವನ್ನು, ಸಚಿವರು ತಮ್ಮ ಪಕ್ಷದ ಶಾಸಕರಿರುವ ಕ್ಷೇತ್ರಗಳಿಗೆ ಮಾತ್ರ ಹಂಚಿಕೆ ಮಾಡಿದ್ದಾರೆ. ವಿರೋಧ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಅನ್ಯಾಯ ಎಸಗಲಾಗಿದೆ.
ಹಾನಗಲ್ ವಿಧಾನಸಭಾ ಕ್ಷೇತ್ರದ 25 ಗ್ರಾಮ ಪಂಚಾಯತ್‌ಗಳಿಗೆ ಯಾವುದೇ ಮಾನದಂಡವಿಲ್ಲದೆ ಬೇಕಾಬಿಟ್ಟಿಯಾಗಿ ಅನುದಾನ ನೀಡಲಾಗಿದೆ ಎಂದು ರಾಜೀವ್ ದೂರಿದ್ದಾರೆ.
ಹಣಕಾಸು ಆಯೋಗದ ಶಿಫಾರಸ್ಸಿನಂತೆ ನಿಗದಿತ ಉದ್ದೇಶಕ್ಕೆ ಬಳಸಬೇಕಾದ ಹಣವನ್ನು ಬೇರೆಡೆಗೆ ತಿರುಗಿಸಲು ಕಾನೂನಿನಲ್ಲಿ ಅವಕಾಶವಿಲ್ಲದಿದ್ದರೂ, ಸರ್ಕಾರ ಶಿಷ್ಟಾಚಾರವನ್ನು ಗಾಳಿಗೆ ತೂರಿದೆ ಎಂದು ಅವರು ಕಿಡಿಕಾರಿದ್ದಾರೆ.


