Saturday, October 11, 2025

ಕಾಂಗ್ರೆಸ್ ಸರ್ಕಾರ ರೈತರ ಬಾಳಿಗೆ ಕೊಳ್ಳಿ ಹಚ್ಚುವ ಸರ್ಕಾರ: ಆರ್.ಅಶೋಕ್ ಆಕ್ರೋಶ

ರಾಜ್ಯ ಕಾಂಗ್ರೆಸ್ ಸರ್ಕಾರ ರೈತರಿಗೆ ಭೂಮಿ ತೋರಿಸುವ ಸರ್ಕಾರ ಅಲ್ಲ, ಆಕಾಶ ತೋರಿಸುವ ಸರ್ಕಾರ. ರೈತರ ಬಾಳಿಗೆ ಕೊಳ್ಳಿ ಹಚ್ಚುವ ಸರ್ಕಾರ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯ ಭೀಮಾನದಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರ ಈ ವರೆಗೂ ಬೆಳೆಹಾನಿ ಪರಿಹಾರ ಕೊಟ್ಟಿಲ್ಲ. ಇವರು ತೆರೆದಂತಹ ಗಂಜಿ ಕೆಂದ್ರಗಳು ಮುಚ್ಚಿಕೊಂಡು ಹೋಗಿವೆ ಎಂದು ದೂರಿದರು.

ಎಂ.ಬಿ. ಪಾಟೀಲ್ ಹೇಳ್ತಾರೆ ?ಬಿಜೆಪಿಯವರು ಈಗ ಯಾಕೆ ಬರ್ತಿದ್ದಾರೆ ಅಂತ. ನೀವು ಸರಿಯಾಗಿ ಪರಿಹಾರ ಕೊಟ್ಟಿದ್ದರೆ ನಾವೇಕೆ ಬರತಾ ಇದ್ದವಿ ?, ಸದ್ಯ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೀವು ಮಾಡಿರುವ ಅನ್ಯಾಯಕ್ಕಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕಿಡಿ ಕಾರಿದರು.

ಪ್ರವಾಹ ನಿಂತು ಹೋದ ಮೇಲೆ ಬಿಜೆಪಿಯವರು ಯಾಕೆ ಬಂದರು ಅಂತ ಕಾಂಗ್ರೆಸನವರು ಕೇಳುತ್ತಾರೆ ?, ಈಗೇನು ಪ್ರವಾಹ ಕಡಿಮೆ ಆಗಿದೆಯಾ ? ಕಬ್ಬಿನಲ್ಲಿ ನೀರು ನಿಂತಿದೆ, ಹತ್ತಿಯಲ್ಲಿ ನೀರು ನಿಂತಿದೆ. ನಿವ್ಯಾಕೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೆಟಿ ಕೊಟ್ಟಿಲ್ಲ. ಮೂವತ್ಮೂರು ಜನ ಮಂತ್ರಿಗಳು ಎಲ್ಲಿದ್ದೀರಿ ? ಎಂದು ಹರಿಹಾಯ್ದರು.

ಆಕಾಶದಲ್ಲಿ ಬಂದು ಹೋಗ್ತೀರಾ ?, ಚಂದ್ರ ಲೋಕ ನೋಡಲು ಬಂದಿಲ್ಲ.
ನೀವು ಭೂಮಿ ನೋಡಬೇಕು. ಅವರು ರಸ್ತೆ ಮೂಲಕ ಬರದೆ ಇರಲು ಕಾರಣ ಜನ ಮುತ್ತಿಗೆ ಹಾಕುತ್ತಾರೆ ಅಂತ. ಸಿದ್ದರಾಮಯ್ಯ ಬಂದರೆ ನೀರಲ್ಲಿ ಇಳಿಯಬೇಕಲ್ಲ, ಅವರಿಗೆ ನೀರಿಗೆ ಇಳಿಯಲು ಆಗಲ್ಲ ಅದಕ್ಕೆ ಆಕಾಶದಲ್ಲಿ ಬಂದು ಹೋಗುತ್ತಿದ್ದಾರೆ ಎಂದು ದೂರಿದರು.

ಆಕಾಶದಲ್ಲಿ ಬಂದು ಹೋಗುವ ಸಿದ್ದರಾಮಯ್ಯ ಪರಿಹಾರವನ್ನು ಆಕಾಶದಲ್ಲಿಯೆ ಕೊಡ್ತಾರೆ. ಈ ಸರ್ಕಾರಕ್ಕೆ ತಾಕತ್ತು, ಧಮ್ ಇದ್ದರೆ ಹಿಂದೆ ಬೊಮ್ಮಾಯಿ, ಯಡಿಯೂರಪ್ಪ ಮುಖ್ಯಮಂತ್ರಿ ಇದ್ದಾಗ ಎಷ್ಟು ಪರಿಹಾರ ಕೊಟ್ಟಿದ್ದಾರೆ. ನೀವೆಷ್ಟು ಕೊಟ್ಡಿದ್ದೀರಾ ದಾಖಲೆ ಕೊಡಿ ?, ಅಂದು ಬಿಜೆಪಿ ಐದು ಲಕ್ಷ ಕೊಟ್ಟಿದೆ ನೀವೆಷ್ಟು ಕೊಡ್ತಾ ಇದ್ದೀರಾ ?, ನೀವು ಒಂದು ಲಕ್ಷ ಇಪ್ಪತ್ತು ಸಾವಿರ ಕೊಡ್ತಾ ಇದ್ದೀರಾ, ಮೊದಲು ರೈತರ ಮನೆ ಬಾಗಿಲಿಗೆ ಬಂದು ಪರಿಹಾರ ಕೊಡಿ ಇಲ್ಲ ಕುರ್ಚಿ ಖಾಲಿ ಮಾಡಿ ಎಂದು ವಾಗ್ದಾಳಿ ನಡೆಸಿದರು.

ಜಿಲ್ಲೆಯಲ್ಲಿ ಬೆಳೆಹಾನಿಯಾದ ಪ್ರದೇಶಕ್ಕೆ ಭೇಟಿ ನೀಡಿ ರೈತರ ಸಂಕಷ್ಟ ಕೇಳುತ್ತಿದ್ದೀವಿ. ನಿನ್ನೆ ಬೆಳೆ ಹಾನಿಯಾದ ಬೆಳಗಾವಿ ಚಿಕ್ಕೋಡಿಗೆ ಭೇಟಿ ನೀಡಿದ್ದೇವೆ. ಮಳೆ ಶುರುವಾಗಿ ಎರಡು ತಿಂಗಳಾಯ್ತು, ಹತ್ತರಿಂದ ಹನ್ನೆರಡು ಲಕ್ಷ ಹೆಕ್ಟೇರ್ ನಷ್ಟು ಬೆಳೆ ಹಾನಿಯಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಐವತ್ತೆರಡು ಸಾವಿರ ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದರು.

ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ, ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ, ಬಿಜೆಪಿ ಜಿಲ್ಲಾಧ್ಯಕ್ಷ ಗುರಲಿಂಗಪ್ಪ ಅಂಗಡಿ, ಮುಖಂಡರಾದ ವಿಜುಗೌಡ ಪಾಟೀಲ, ಕಾಸುಗೌಡ ಬಿರಾದಾರ, ಸುರೇಶ ಬಿರಾದಾರ ಇದ್ದರು.

error: Content is protected !!