Friday, November 7, 2025

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಹಳ ದಿನ ಉಳಿಯಲ್ಲ, ರಾಷ್ಟ್ರಪತಿ ಆಳ್ವಿಕೆ ಗ್ಯಾರಂಟಿ: ಈಶ್ವರಪ್ಪ ಭವಿಷ್ಯ!

ಹೊಸದಿಗಂತ ವಿಜಯಪುರ

ರಾಜ್ಯ ಕಾಂಗ್ರೆಸ್ ಸರ್ಕಾರ ಬಹಳ ದಿನ ಉಳಿಯುವುದಿಲ್ಲ, ಶೀಘ್ರದಲ್ಲಿಯೇ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಅಥವಾ ಮಧ್ಯಂತರ ಚುನಾವಣೆ ಬರುವ ಸಾಧ್ಯತೆ ಇದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರವು ಅನುದಾನ ಹಂಚಿಕೆಯಲ್ಲೂ ಪಕ್ಷ ಭೇದ ಮಾಡುತ್ತಿದೆ. ಆಡಳಿತ ಪಕ್ಷದವರಿಗೆ ೫೦ ಕೋಟಿ ರೂ. ಅನುದಾನ ನೀಡಿದರೆ, ಪ್ರತಿಪಕ್ಷದವರಿಗೆ ಕೇವಲ ೨೫ ಕೋಟಿ ರೂ. ನೀಡಿ ಮೂಗಿಗೆ ತುಪ್ಪ ಒರೆಸುವ ಕಾರ್ಯ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಸಂಘ ಪರಿವಾರ ಕುರಿತ ಹೇಳಿಕೆಗಳಿಗೆ ಸಂಬಂಧಿಸಿದ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಚಿವ ಪ್ರಿಯಾಂಕ್ ಖರ್ಗೆ, ಎಂ.ಬಿ. ಪಾಟೀಲ್ ಬೇಕಾಬಿಟ್ಟಿ ಹೇಳಿಕೆ ನೀಡುತ್ತಾ ಹಿಂದು ಸಮಾಜ ಒಡೆಯುವ ಪ್ರಯತ್ನದಲ್ಲಿ ಅಗ್ರಗಣ್ಯರಾಗುತ್ತಿದ್ದಾರೆ. ಸರ್ಕಾರ ಮಾಡುವ ಕೆಲಸವನ್ನೇ ಸಂಘ ಪರಿವಾರ ಮಾಡುತ್ತಿದೆ, ಹೀಗಿದ್ದರೂ ಸರ್ಕಾರಕ್ಕೆ ಸಂಘ ಪರಿವಾರದ ಮೇಲೆ ದ್ವೇಷ ಏಕೆ ಎಂದು ಪ್ರಶ್ನಿಸಿದರು. ಸರ್ಕಾರಿ ನೌಕರರು ಸಂಘ ಪರಿವಾರದ ಚಟುವಟಿಕೆಗಳಲ್ಲಿ ಭಾಗವಹಿಸಬಾರದು ಎಂಬ ಸಚಿವರ ಹೇಳಿಕೆಯೇ ಅಸಮಂಜಸ, ನ್ಯಾಯಾಲಯವೂ ಕೂಡಾ ಸಂಘ ಪರಿವಾರ ರಾಜಕೀಯ ಸಂಘಟನೆ ಅಲ್ಲ ಎಂದು ಹೇಳಿದೆ. ಇದನ್ನು ಸಚಿವರು ಓದಿಲ್ಲವೇ? ಎಂದು ಚಾಟಿ ಬೀಸಿದರು.

ಸಧ್ಯ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೇಳೋರು-ಕೇಳೋರು ಯಾರೂ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಅತ್ತ ನಾನೇ ಐದು ವರ್ಷ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಹೇಳಿದರೆ, ಇತ್ತ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುವ ಪ್ರಯತ್ನ ನಡೆಯುತ್ತಿದೆ. ಇನ್ನೊಂದೆಡೆ ಅವರನ್ನು ಯಾವುದೇ ಕಾರಣಕ್ಕೂ ಮುಖ್ಯಮಂತ್ರಿಯಾಗಲು ಅವಕಾಶ ಕೊಡಲ್ಲ ಎಂದು ಇನ್ನೊಬ್ಬರು ಹೇಳುತ್ತಾರೆ. ಇದು ಕಾಂಗ್ರೆಸ್ ಪಕ್ಷದ ಆಂತರಿಕ ಭಿನ್ನಾಭಿಪ್ರಾಯಗಳನ್ನು ಬಹಿರಂಗಗೊಳಿಸುತ್ತದೆ ಎಂದು ಈಶ್ವರಪ್ಪ ವ್ಯಂಗ್ಯವಾಡಿದರು.

error: Content is protected !!