ಹೊಸದಿಗಂತ ಚಿತ್ರದುರ್ಗ:
“ಕೇಂದ್ರ ಸರ್ಕಾರದ ‘ವಿಬಿ ಜಿ ರಾಮ್ ಜಿ’ ಯೋಜನೆಯಲ್ಲಿ ಭಗವಾನ್ ಶ್ರೀರಾಮನ ಹೆಸರಿರುವುದು ಕಾಂಗ್ರೆಸ್ ನಾಯಕರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಈ ಅಲರ್ಜಿಯಿಂದಾಗಿಯೇ ಅವರು ನರೇಗಾ ಹೆಸರು ಬದಲಿಸಿ ಗಾಂಧೀಜಿಗೆ ಅವಮಾನ ಮಾಡಲಾಗುತ್ತಿದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ,” ಎಂದು ಸಂಸದ ಗೋವಿಂದ ಕಾರಜೋಳ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಭಾನುವಾರ ಚಿತ್ರದುರ್ಗದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ನೆಹರೂ ಕುಟುಂಬದ ವಿರುದ್ಧ ಹರಿಹಾಯ್ದರು. ಅವರ ಭಾಷಣದ ಪ್ರಮುಖ ಅಂಶಗಳು ಇಲ್ಲಿವೆ:
ಹಿಂದಿನ ನರೇಗಾ ಯೋಜನೆಯಲ್ಲಿ ನಿರೀಕ್ಷಿತ ಮಟ್ಟದ ಆಸ್ತಿ ಸೃಷ್ಟಿಯಾಗುತ್ತಿರಲಿಲ್ಲ ಮತ್ತು ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡಲಾಗಿತ್ತು. ಆದರೆ ಹೊಸ ನೀತಿಯನ್ವಯ ಹಣ ಲೂಟಿ ಮಾಡಲು ಅವಕಾಶವಿಲ್ಲದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ‘ವಿಬಿ ಜಿ ರಾಮ್ ಜಿ’ ಯೋಜನೆಯಡಿ ಗ್ರಾಮ ಪಂಚಾಯತಿಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗಿದ್ದು, ಕೆಲಸದ ದಿನಗಳನ್ನು 150ಕ್ಕೆ ಹೆಚ್ಚಿಸಲಾಗಿದೆ. ರೈತರು ತಮ್ಮ ಜಮೀನಿನಲ್ಲೇ ಕೆಲಸ ಮಾಡಬಹುದು ಮತ್ತು ಹಣ ನೇರವಾಗಿ ಕಾರ್ಮಿಕರ ಖಾತೆಗೆ ಜಮೆಯಾಗಲಿದೆ.
“ಗಾಂಧೀಜಿಯವರಿಗೂ ನೆಹರೂ ಕುಟುಂಬಕ್ಕೂ ಯಾವುದೇ ರಕ್ತಸಂಬಂಧವಿಲ್ಲ. ಕೇವಲ ರಾಜಕೀಯ ಲಾಭಕ್ಕಾಗಿ ಗಾಂಧಿ ಹೆಸರನ್ನು ಬಳಸಿಕೊಂಡು ದೇಶದ ಜನರಿಗೆ ವಂಚಿಸಲಾಗುತ್ತಿದೆ,” ಎಂದು ಕಾರಜೋಳ ಆರೋಪಿಸಿದರು. 1961ರಲ್ಲಿ ನೆಹರೂ ಅವರು ಸಬರಮತಿ ಆಶ್ರಮದ ಅಭಿವೃದ್ಧಿಗೆ ಸಮಿತಿ ರಚಿಸಿದರೂ ಯಾವುದೇ ಅನುದಾನ ನೀಡದೆ ಅದನ್ನು ನಿರ್ಲಕ್ಷಿಸಿದ್ದರು. ಆದರೆ ನರೇಂದ್ರ ಮೋದಿಯವರು ಮುಖ್ಯಮಂತ್ರಿಯಾಗಿದ್ದಾಗ ಆಶ್ರಮವನ್ನು ಅಭಿವೃದ್ಧಿಪಡಿಸಿ ರಾಷ್ಟ್ರೀಯ ಸ್ಮಾರಕವನ್ನಾಗಿ ಮಾಡಿದರು ಎಂದು ಅವರು ನೆನಪಿಸಿದರು.
ರಾಜ್ಯದ 25ಕ್ಕೂ ಹೆಚ್ಚು ಸಂಸ್ಥೆಗಳು ಹಾಗೂ ದೇಶದ 74 ಪ್ರಮುಖ ರಸ್ತೆ, ಕಟ್ಟಡಗಳಿಗೆ ನೆಹರೂ ಕುಟುಂಬದವರ ಹೆಸರಿಡಲಾಗಿದೆ. 51 ಪ್ರಶಸ್ತಿಗಳು ಅವರ ಹೆಸರಿನಲ್ಲೇ ಇವೆ. ಅಲ್ಲಿ ಗಾಂಧೀಜಿಯವರ ಹೆಸರು ನೆನಪಾಗದ ಕಾಂಗ್ರೆಸ್ಸಿಗರಿಗೆ, ಈಗ ಗಾಂಧಿ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಪ್ರಧಾನಿ ಮೋದಿ 13 ಕೋಟಿ ಶೌಚಾಲಯ ನಿರ್ಮಿಸಿದರೂ ಎಲ್ಲಿಯೂ ತಮ್ಮ ಹೆಸರು ಹಾಕಿಕೊಳ್ಳಲಿಲ್ಲ ಎಂದು ಕಾರಜೋಳ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ ಸೇರಿದಂತೆ ಜಿಲ್ಲಾ ಘಟಕದ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.

