ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಕಾಂಗ್ರೆಸ್ ನಾಯಕ ನಾನಾ ಪಟೋಲೆ ಶ್ರೀರಾಮನಿಗೆ ಹೋಲಿಸಿದ್ದು, ರಾಜಕೀಯ ವಿವಾದ ಭುಗಿಲೆದ್ದಿದೆ. ಕಾಂಗ್ರೆಸ್ ನಾಯಕನ ಈ ಹೋಲಿಕೆಗೆ ಬಿಜೆಪಿ ಭಾರಿ ಆಕ್ರೋಶ ವ್ಯಕ್ತಪಡಿಸಿದೆ.
ಅಯೋಧ್ಯೆಯ ರಾಮ ಮಂದಿರಕ್ಕೆ ರಾಹುಲ್ ಗಾಂಧಿ ಇನ್ನೂ ಏಕೆ ಭೇಟಿ ನೀಡಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪಟೋಲೆ, ರಾಹುಲ್ ಗಾಂಧಿ ‘ಶ್ರೀರಾಮನ ಕೆಲಸವನ್ನೇ ಮಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ.
ಕಿರುಕುಳಕ್ಕೆ ಒಳಗಾದವರು ಹಾಗೂ ವಂಚಿತರಿಗೆ ನ್ಯಾಯ ಒದಗಿಸುವುದೇ ಶ್ರೀರಾಮನ ಕೆಲಸ. ಅದನ್ನೇ ನಮ್ಮ ರಾಹುಲ್ ಗಾಂಧಿ ಮಾಡುತ್ತಿದ್ದಾರೆ.
ರಾಮ ಮಂದಿರದಲ್ಲಿ ಫೋಟೊ ಸೆಷನ್ ಮಾಡುವುದಕ್ಕಿಂತ ಈ ಸೇವೆಯನ್ನು ಮಾಡುವುದನ್ನು ಅವರು ಹೆಚ್ಚು ಇಷ್ಟಪಡುತ್ತಾರೆ ಎಂದು ಪಟೋಲೆ ಹೇಳಿದ್ದು, ರಾಜಕೀಯ ವಿವಾದ ಭುಗಿಲೆದ್ದಿದೆ.
ಶೆಹಜಾದ್ ಪೂನಾವಾಲ್ಲಾ ಎಕ್ಸ್ ಪೋಸ್ಟ್:
ಪಟೋಲೆ ರಾಹುಲ್ ಗಾಂಧಿ ಅವರನ್ನು ಶ್ರೀರಾಮಚಂದ್ರನಿಗೆ ಹೋಲಿಕೆ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ’ಕಾಂಗ್ರೆಸ್ ಹಿಂದು ಧರ್ಮದ ನಂಬಿಕೆಗೆ ಅವಮಾನ ಮಾಡುತ್ತಿದೆ ಎಂದು ಕಿಡಿಕಾರಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ಸಿ.ಆರ್. ಕೇಶವನ್, ‘ಶ್ರೀರಾಮನ ಪ್ರಾಣ ಪ್ರತಿಷ್ಠೆಯನ್ನು “ನಾಚ್ ಗಾನಾ” ಎಂದು ರಾಹುಲ್ ಗಾಂಧಿ ವ್ಯಂಗ್ಯ ಮಾಡಿದ್ದೇಕೆ ಎಂಬುದನ್ನು ಪ್ರಶ್ನಿಸುವ ಧೈರ್ಯ ಪಟೋಲೆ ಅವರಿಗಿದೆಯೇ? ಅವರು ಇನ್ನೂ ರಾಮ ಮಂದಿರಕ್ಕೆ ಏಕೆ ಹೋಗಿಲ್ಲ ಎಂದು ಕೇಳುವ ಸಾಹಸ ಮಾಡುತ್ತಾರೆಯೇ?ʼʼ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ನಾಯಕರು ಮತ್ತೊಮ್ಮೆ ‘ಅತಿಯಾದ ಚಾಪ್ಲೂಸಿ’ ತೋರಿಸಿದ್ದಾರೆ. ಕಾಂಗ್ರೆಸ್ಸಿಗರು ಇತ್ತ ರಾಹುಲ್ ಗಾಂಧಿ ಶ್ರೀರಾಮನಂತಿದ್ದಾರೆ ಎನ್ನುತ್ತಾರೆ, ಅದೇ ನಾಯಕರು ಸೋನಿಯಾ ಗಾಂಧಿಯಿಂದಾಗಿಯೇ ಕ್ರಿಸ್‌ಮಸ್ ಆಚರಿಸಲಾಗುತ್ತಿದೆ ಎಂತಲೂ ಹೇಳುತ್ತಿದ್ದಾರೆ. ಇದು ಯಾವ ರೀತಿಯ ಚಾಪ್ಲೂಸಿ? ಹಿಂದು ಧರ್ಮವನ್ನು ಅವಮಾನಿಸುತ್ತೀದ್ದಿರಾ? ಎಂದು ಬಿಜೆಪಿ ನಾಯಕ ಶೆಹಜಾದ್ ಪೂನಾವಾಲ್ಲಾ ಪ್ರಶ್ನಿಸಿದ್ದಾರೆ.
ಈ ಹಿಂದೇ ಇದೇ ಕಾಂಗ್ರೆಸ್ ರಾಮ ಮಂದಿರ ಕಟ್ಟಬಾರದು ಎಂದಿತ್ತು…ಇದೇ ಪಕ್ಷ ರಾಮ ಮಂದಿರ ಪ್ರಾಣ ಪ್ರತಿಷ್ಠೆಯನ್ನು ‘ನಾಚ್ ಗಾನಾ’ ಎಂದಿತ್ತು. ಇದೇ ರೀತಿ ಕಾಂಗ್ರೆಸಿಗರು ಹಿಂದೂ ಧರ್ಮದ ಮೇಲೆ ನಿರಂತರವಾಗಿ ದಾಳಿ ಮಾಡಿ ಅವಮಾನ ಮಾಡುತ್ತಲೇ ಇದ್ದಾರೆ ಎಂದು ಪೂನಾವಾಲ್ಲಾ ಆರೋಪಿಸಿದ್ದಾರೆ.

