ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಮೈತ್ರಿಕೂಟ ದಯನೀಯವಾಗಿ ಸೋತ್ತಿದ್ದು, ಇದರ ಬೆನ್ನಲ್ಲೇ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ರಾಹುಲ್ ಗಾಂಧಿಗೆ ಬುದ್ದಿಮಾತು ಹೇಳಿದ್ದಾರೆ.
ಬಿಹಾರದ ಚುನಾವಣೆಯ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಣೆಯನ್ನು ಮಾಡಿದ್ದ ಸಿಎಂ ಅಬ್ದುಲ್ಲಾ, ಮಹಿಳೆಯರಿಗಾಗಿ ನಿತೀಶ್ ಕುಮಾರ್ ಮಾಡಿದ ಕೆಲಸದಿಂದಾಗಿ, ಎನ್‌ಡಿಎ ಮೈತ್ರಿಕೂಟ ದೊಡ್ಡ ಗೆಲುವನ್ನು ಕಂಡಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ವೋಟ್ ಚೋರಿ ವಿಚಾರದಲ್ಲಿ ರಾಹುಲ್ ಗಾಂಧಿ, ಬಿಹಾರದಲ್ಲಿ ಅಭಿಯಾನವನ್ನು ನಡೆಸಿದ್ದರು. ಈ ಅಭಿಯಾನಕ್ಕೆ ಜನರ ಪ್ರತಿಕ್ರಿಯೆ ಉತ್ತಮವಾಗಿತ್ತು. ಇದು, ನಮ್ಮ ಪಾರ್ಟಿಗೆ ಮತದಾರ ಕೊಡುತ್ತಿರುವ ಸಮರ್ಥನೆ ಎಂದು ರಾಹುಲ್ ಗಾಂಧಿ ಅಂದು ಕೊಂಡರು. ಅದೆಲ್ಲಾ ತಪ್ಪಾಯಿತು ಎಂದು ಒಮರ್ ಅಬ್ದುಲ್ಲಾ ಅಭಿಪ್ರಾಯ ಪಟ್ಟಿದ್ದಾರೆ.
ವೋಟರ್ ಅಧಿಕಾರ್ ಯಾತ್ರೆಗೆ ಬಂದ ಜನರನ್ನು ನೋಡಿ, ಹೆಚ್ಚಿನ ಸೀಟ್ ಬೇಕೆಂದು ರಾಹುಲ್ ಗಾಂಧಿ ಹಠ ಹಿಡಿದರು. ಇದು, ಸೀಟು ಹಂಚಿಕೆ ವಿಚಾರ ಕಗ್ಗಂಟಾಗಲು ಕಾರಣವಾಯಿತು. ಚುನಾವಣೆಯಲ್ಲೂ ಫ್ರೆಂಡ್ಲಿ ಫೈಟ್ ಎಂದು ಮಹಾಘಟಬಂಧನ್ ಒಬ್ಬರಿಗೊಬ್ಬರು ಕಣದಲ್ಲಿದ್ದರು ಎಂದು ಬಿಹಾರದ ಸೋಲನ್ನು ವಿಶ್ಲೇಷಿಸಿದ್ದಾರೆ.
ನಿತೀಶ್ ಕುಮಾರ್ ಅವರು ಹತ್ತನೇ ಬಾರಿ ಮುಖ್ಯಮಂತ್ರಿಯಾಗಿದ್ದಾರೆ, ಯಾವುದೇ ರಾಜಕಾರಣಿಗೆ ಇದು ಸಾಮಾನ್ಯದ ವಿಷಯವಲ್ಲ. ಮಹಿಳೆಯರ ಪರವಾಗಿ ಯೋಜನೆಗಳನ್ನು ರೂಪಿಸಿದರು, ಹೊಸ ಸ್ಕೀಂ ಜಾರಿಗೆ ತಂದರು. ಇದು, ಎನ್‌ಡಿಎ ಮೈತ್ರಿಕೂಟಕ್ಕೆ ಇಷ್ಟು ದೊಡ್ಡ ಮಟ್ಟದ ಗೆಲುವು ಬರಲು ಕಾರಣವಾಯಿತು ಎಂದು ಒಮರ್ ಅಬ್ದುಲ್ಲಾ ಅಭಿಪ್ರಾಯ ಪಟ್ಟಿದ್ದಾರೆ.
ಒಂದೊಂದು ಚುನಾವಣೆ ರಾಜಕೀಯ ಪಾರ್ಟಿಗಳಿಗೆ ಪಾಠವಾಗಬೇಕು. ಸೋಲು ಗೆಲುವು ಚುನಾವಣಾ ರಾಜಕೀಯದಲ್ಲಿ ಸಾಮಾನ್ಯ. ಆದರೆ, ಮಾಡಿದ ತಪ್ಪನ್ನು ಮತ್ತೆಮತ್ತೆ ಮಾಡಿದರೆ, ಮತದಾರ ಕ್ಷಮಿಸುತ್ತಾನಾ ಎಂದು ಹೇಳಿದ್ದಾರೆ. ಆಮೂಲಕ, ಪರೋಕ್ಷವಾಗಿ, ವೋಟ್ ಚೋರಿ, SIR ವಿಚಾರವನ್ನು ಇಟ್ಟುಕೊಂಡು, ಕಾಂಗ್ರೆಸ್, ಮತದಾರರ ಬಳಿ ಹೋಗಿದ್ದು ತಪ್ಪು ಎಂದು ಅಭಿಪ್ರಾಯ ಪಟ್ಟಿದ್ದಾರೆ.

