March 31, 2026
Tuesday, March 31, 2026
spot_img

ಜನರ ನೆಮ್ಮದಿ ಕೆಡಿಸುವುದೇ ಕಾಂಗ್ರೆಸ್ ಗುರಿ: ಸರ್ಕಾರದ ವಿರುದ್ಧ ಛಲವಾದಿ ವಾಗ್ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಗಳನ್ನು ಮರು ಆರಂಭಿಸಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಈ ನಡೆಯಿಂದ ಶೈಕ್ಷಣಿಕ ಆವರಣದಲ್ಲಿ ಶಾಂತಿ ಕದಡಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

“ಕಾಂಗ್ರೆಸ್‌ನವರು ಅಧಿಕಾರದಲ್ಲಿದ್ದರೆ ಜನರನ್ನು ನೆಮ್ಮದಿಯಾಗಿ ಇರಲು ಬಿಡುವುದಿಲ್ಲ. ಕಾಲೇಜುಗಳಾದ ಮೇಲೆ ಮುಂದೊಂದು ದಿನ ಮನೆ-ಮನೆಯಲ್ಲೂ ಚುನಾವಣೆ ನಡೆಸಿ, ಗಂಡ-ಹೆಂಡತಿ ಮತ್ತು ಮಕ್ಕಳ ನಡುವೆ ಜಗಳ ಹಚ್ಚಿ ಕುಟುಂಬದ ಸುಖವನ್ನು ಕಿತ್ತುಕೊಳ್ಳಬಹುದು” ಎಂದು ಅವರು ಲೇವಡಿ ಮಾಡಿದರು.

ಚುನಾವಣೆ ನಡೆಸುವುದರಿಂದಲೇ ನಾಯಕತ್ವ ಬೆಳೆಯುತ್ತದೆ ಎನ್ನುವುದು ತಪ್ಪು ಕಲ್ಪನೆ. “ನಾಯಕತ್ವವನ್ನು ಯಾರೂ ಕಲಿಸಿಕೊಡುವ ಅಗತ್ಯವಿಲ್ಲ. ಧಾರವಾಡದ ಹೋರಾಟಗಳಲ್ಲಿ ಸಾವಿರಾರು ಜನ ನಾಯಕತ್ವವಿಲ್ಲದೆಯೇ ಹೋರಾಡಿದ್ದರು. ನಾಯಕತ್ವವು ಪುಸ್ತಕಗಳಿಂದ ಅಥವಾ ಪಾಠದಿಂದ ಬರುವುದಿಲ್ಲ, ಅದು ಆಯಾ ಸಂದರ್ಭಕ್ಕೆ ತಕ್ಕಂತೆ ತಾನಾಗಿಯೇ ಸೃಷ್ಟಿಯಾಗುತ್ತದೆ” ಎಂದು ಅವರು ಅಭಿಪ್ರಾಯಪಟ್ಟರು.

“ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಜನರು ನೆಮ್ಮದಿಯಿಂದ ಬದುಕಲು ಏನು ಮಾಡಬೇಕೋ ಅದನ್ನು ಮಾಡುತ್ತೇವೆ. ಇಂತಹ ಅನಗತ್ಯ ಚುನಾವಣೆಗಳ ಮೂಲಕ ಜನರನ್ನು ಎತ್ತಿಕಟ್ಟುವ ಕೆಲಸ ಮಾಡುವುದಿಲ್ಲ” ಎಂದು ಅವರು ಗುಡುಗಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !