Saturday, October 11, 2025

ನಾಲ್ಕು ರಾಜ್ಯ, 18 ಜಿಲ್ಲೆಗಳ ಸಂಪರ್ಕ: 24,634 ಕೋಟಿ ರೂ. ಮೌಲ್ಯದ ರೈಲ್ವೆ ಯೋಜನೆಗಳಿಗೆ ಕೇಂದ್ರ ಸರಕಾರ ಅನುಮೋದನೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸಚಿವ ಸಂಪುಟಯಲ್ಲಿ 24,634 ಕೋಟಿ ರೂ. ಮೌಲ್ಯದ 4 ಪ್ರಮುಖ ರೈಲ್ವೆ ಯೋಜನೆಗಳಿಗೆ ಇಂದು ಅನುಮೋದನೆ ನೀಡಿದೆ.

ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್ ಮತ್ತು ಛತ್ತೀಸ್‌ಗಢ ರಾಜ್ಯಗಳ 18 ಜಿಲ್ಲೆಗಳನ್ನು ವ್ಯಾಪಿಸಿರುವ ವಾರ್ಧಾ-ಭುಸಾವಲ್ (314 ಕಿಮೀ), ಗೊಂಡಿಯಾ-ಡೊಂಗರ್‌ಗಢ (84 ಕಿಮೀ), ವಡೋದರಾ-ರತ್ಲಾಮ್ (259 ಕಿಮೀ) ಮತ್ತು ಇಟಾರ್ಸಿ-ಭೋಪಾಲ್-ಬಿನಾ (237 ಕಿಮೀ) ಮಾರ್ಗಗಳ ಮೂರನೇ ಮತ್ತು ನಾಲ್ಕನೇ ಮಾರ್ಗಗಳು ಇದರಲ್ಲಿ ಸೇರಿವೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.

ಅನುಮೋದನೆಗೊಂಡಿರುವ ಮಲ್ಟಿ-ಟ್ರ್ಯಾಕಿಂಗ್ ಯೋಜನೆಯು ಸುಮಾರು 85.84 ಲಕ್ಷ ಜನಸಂಖ್ಯೆಯನ್ನು ಹೊಂದಿರುವ 3,633 ಹಳ್ಳಿಗಳು ಮತ್ತು 2 ಜಿಲ್ಲೆಗಳಾದ ವಿದಿಶಾ ಮತ್ತು ರಾಜನಂದಗಾಂವ್​ಗೆ ಸಂಪರ್ಕವನ್ನು ಹೆಚ್ಚಿಸುತ್ತದೆ. ಇದು ಭಾರತೀಯ ರೈಲ್ವೆಯ ಅಸ್ತಿತ್ವದಲ್ಲಿರುವ ಜಾಲವನ್ನು ಸುಮಾರು 894 ಕಿ.ಮೀ ಹೆಚ್ಚಿಸುತ್ತವೆ.

ಈ ಯೋಜನೆಗಳನ್ನು ಪ್ರಧಾನಮಂತ್ರಿ-ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅಡಿಯಲ್ಲಿ ಯೋಜಿಸಲಾಗಿದೆ. ಈ ಯೋಜನೆಗಳು ಜನರು, ಸರಕುಗಳು ಮತ್ತು ಸೇವೆಗಳ ಚಲನೆಗೆ ತಡೆರಹಿತ ಸಂಪರ್ಕವನ್ನು ಒದಗಿಸುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

‘ಇದು ದೇಶಾದ್ಯಂತ ಪ್ರವಾಸಿಗರನ್ನು ಆಕರ್ಷಿಸುವ ಸಾಂಚಿ, ಸತ್ಪುರ ಹುಲಿ ಮೀಸಲು ಪ್ರದೇಶ, ಭಿಂಬೆಟ್ಕಾದ ರಾಕ್ ಶೆಲ್ಟರ್, ಹಜಾರ ಜಲಪಾತ, ನವೇಗಾಂವ್ ರಾಷ್ಟ್ರೀಯ ಉದ್ಯಾನವನ ಮುಂತಾದ ಪ್ರಮುಖ ಪ್ರವಾಸಿ ತಾಣಗಳಿಗೆ ರೈಲು ಸಂಪರ್ಕವನ್ನು ಒದಗಿಸುತ್ತದೆ’ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

error: Content is protected !!