Monday, January 26, 2026
Monday, January 26, 2026
spot_img

ಸಂವಿಧಾನದ ಮೌಲ್ಯಗಳೇ ಪ್ರಜಾಪ್ರಭುತ್ವದ ಜೀವಾಳ: ಸಚಿವ ಭೋಸರಾಜು

ಹೊಸದಿಗಂತ ಮಡಿಕೇರಿ:

“ವ್ಯಕ್ತಿಗಿಂತ ಸಮಾಜ, ಸಮಾಜಕ್ಕಿಂತ ದೇಶ ದೊಡ್ಡದು ಎಂಬ ಧ್ಯೇಯದೊಂದಿಗೆ ನಾವೆಲ್ಲರೂ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಬೇಕಿದೆ,” ಎಂದು ಕೊಡಗು ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಎನ್.ಎಸ್. ಭೋಸರಾಜು ಕರೆ ನೀಡಿದರು.

ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 77ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವಕ್ಕೆ ನೈಜ ಅರ್ಥ ಸಿಗಬೇಕಾದರೆ ಸಂವಿಧಾನ ಬದ್ಧ ಜೀವನ ಇಂದಿನ ತುರ್ತು ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕೊಡಗಿನ ದಶಕಗಳ ಕಾಲದ ‘ಸಿ ಮತ್ತು ಡಿ’ ವರ್ಗದ ಜಮೀನುಗಳ ಸಮಸ್ಯೆಗೆ ಶೀಘ್ರವೇ ತಾರ್ಕಿಕ ಅಂತ್ಯ ಹಾಡಲಾಗುವುದು. ಇದಕ್ಕಾಗಿ ಈಗಾಗಲೇ ಸಮಿತಿ ರಚನೆಯಾಗಿದ್ದು, ವರದಿ ಬಂದ ತಕ್ಷಣ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಸಚಿವರು ಭರವಸೆ ನೀಡಿದರು.

‘ಭೂಸುರಕ್ಷಾ’ ಯೋಜನೆಯಡಿ ಜಿಲ್ಲೆಯ ಐದೂ ತಾಲೂಕುಗಳ ದಾಖಲೆಗಳ ಸ್ಕ್ಯಾನಿಂಗ್ ಪೂರ್ಣಗೊಂಡಿದ್ದು, ಕೊಡಗು ರಾಜ್ಯದಲ್ಲೇ ಪ್ರಥಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರಸ್ತುತ ಡಿಸಿ ಮತ್ತು ಎಸಿ ಕಚೇರಿಗಳ ದಾಖಲೆಗಳ ಡಿಜಿಟಲೀಕರಣ ನಡೆಯುತ್ತಿದೆ.

ನೂತನ ತಾಲೂಕುಗಳಾದ ಕುಶಾಲನಗರ ಮತ್ತು ಪೊನ್ನಂಪೇಟೆಯಲ್ಲಿ ತಲಾ 8.60 ಕೋಟಿ ರೂ. ವೆಚ್ಚದಲ್ಲಿ ‘ಪ್ರಜಾಸೌಧ’ ಕಾಮಗಾರಿಗಳು ವೇಗವಾಗಿ ಸಾಗುತ್ತಿವೆ.

ಜಿಲ್ಲೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಂದ ಈವರೆಗೆ ಸುಮಾರು 1.49 ಕೋಟಿ ಫಲಾನುಭವಿಗಳು ಸೌಲಭ್ಯ ಪಡೆದಿದ್ದು, ಬಡವರ ಆರ್ಥಿಕ ಸಬಲೀಕರಣಕ್ಕಾಗಿ 610.11 ಕೋಟಿ ರೂ. ನೆರವು ನೀಡಲಾಗಿದೆ.

ಸಮಾರಂಭದಲ್ಲಿ ಮಹಾತ್ಮ ಗಾಂಧಿ, ಅಂಬೇಡ್ಕರ್, ಪಟೇಲ್ ಅವರೊಂದಿಗೆ ಕೊಡಗಿನ ವೀರ ಪುತ್ರರಾದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಅವರ ತ್ಯಾಗವನ್ನು ಸಚಿವರು ಸ್ಮರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಡಾ. ಮಂಥರ್ ಗೌಡ ವಹಿಸಿದ್ದರು. ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಆರ್.ಎನ್. ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಪೋಲಿಸ್ ಮತ್ತು ಎನ್.ಸಿ.ಸಿ ತಂಡಗಳಿಂದ ಆಕರ್ಷಕ ಪಥಸಂಚಲನ ಹಾಗೂ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ವೈವಿಧ್ಯಗಳು ಪ್ರೇಕ್ಷಕರ ಮನಸೂರೆಗೊಂಡವು.

Must Read