ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೊಬೈಲ್ ಬಳಕೆದಾರರೇ ಗಮನಿಸಿ! ಹಣದುಬ್ಬರ ಮತ್ತು ಹೆಚ್ಚಿದ ಸುಂಕದ ಹೊರೆ ಮತ್ತೊಮ್ಮೆ ನಿಮ್ಮ ಜೇಬನ್ನು ಸುಡಲಿದೆ. ಇತ್ತೀಚೆಗೆ ಜಿಯೋ ಹೊರತುಪಡಿಸಿ ಬಹುತೇಕ ಎಲ್ಲ ಟೆಲಿಕಾಂ ಕಂಪನಿಗಳು ತಮ್ಮ ಯೋಜನೆಗಳ ದರವನ್ನು ಹೆಚ್ಚಿಸಿದ್ದು, ಮುಂದಿನ ಕೆಲವೇ ವಾರಗಳಲ್ಲಿ ಇನ್ನೊಂದು ಸುತ್ತಿನ ಬೆಲೆ ಏರಿಕೆಗೆ ಸಿದ್ಧತೆ ನಡೆಸುತ್ತಿವೆ.
ಮಾಧ್ಯಮ ವರದಿಗಳ ಪ್ರಕಾರ, ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್, ಖಾಸಗಿ ದಿಗ್ಗಜರಾದ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ತಮ್ಮ ಸೇವೆಗಳ ಸುಂಕವನ್ನು ಹೆಚ್ಚಿಸಲು ನಿರ್ಧರಿಸಿವೆ. ಇದರ ನೇರ ಪರಿಣಾಮ ಮೊಬೈಲ್ ಗ್ರಾಹಕರ ಮೇಲಾಗಲಿದ್ದು, ಮುಂದಿನ ದಿನಗಳಲ್ಲಿ ನೀವು ರೀಚಾರ್ಜ್ ಯೋಜನೆಗಳಿಗೆ ಗಣನೀಯವಾಗಿ ಹೆಚ್ಚು ಹಣ ಪಾವತಿಸಬೇಕಾಗುತ್ತದೆ.
ಕಳೆದ ಕೆಲವು ತಿಂಗಳಿಂದ ಟೆಲಿಕಾಂ ಕಂಪನಿಗಳ ಆದಾಯದಲ್ಲಿ ತೀವ್ರ ಇಳಿಕೆ ಕಂಡುಬರುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕಂಪನಿಗಳ ಆದಾಯ ಬೆಳವಣಿಗೆಯು ಹಿಂದಿನ ನಾಲ್ಕು ತ್ರೈಮಾಸಿಕಗಳಲ್ಲಿ ಇದ್ದ ಶೇ. 14-16 ರಿಂದ ಶೇ. 10ಕ್ಕೆ ಕುಸಿದಿದೆ. ಡಿಸೆಂಬರ್ ತ್ರೈಮಾಸಿಕದಲ್ಲಿ ಈ ಇಳಿಕೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಈ ಆದಾಯ ಕುಸಿತವನ್ನು ಸರಿದೂಗಿಸಲು ಮತ್ತು ಲಾಭವನ್ನು ಹೆಚ್ಚಿಸಲು ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಕಂಪನಿಗಳು ಭಾವಿಸಿವೆ.
ಒಟ್ಟಾರೆಯಾಗಿ ಟೆಲಿಕಾಂ ಸುಂಕಗಳು ಶೇಕಡಾ 15 ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಂದಾಜಿಸಿದ್ದಾರೆ. ಬ್ರೋಕರೇಜ್ ಸಂಸ್ಥೆ ಮೋತಿಲಾಲ್ ಓಸ್ವಾಲ್‌ನ ಇಟಿ ಟೆಲಿಕಾಂ ವರದಿಯ ಪ್ರಕಾರ, ನಿರಂತರ ಹಣದುಬ್ಬರ ಮತ್ತು ಮುಂಬರುವ ತಿಂಗಳುಗಳಲ್ಲಿ ಪ್ರಮುಖ ಚುನಾವಣೆಗಳ ಅನುಪಸ್ಥಿತಿಯನ್ನು ಗಮನಿಸಿ, ಟೆಲಿಕಾಂ ಕಂಪನಿಗಳು ಡಿಸೆಂಬರ್‌ನಲ್ಲಿ ಸುಂಕವನ್ನು ಹೆಚ್ಚಿಸಬಹುದು.
ಈ ಬೆಲೆ ಏರಿಕೆಯ ಪರಿಣಾಮವಾಗಿ, ಸಾಮಾನ್ಯವಾಗಿ ಬಳಕೆಯಲ್ಲಿರುವ 28 ದಿನಗಳ ಮಾನ್ಯತೆಯುಳ್ಳ ರೀಚಾರ್ಜ್ ಯೋಜನೆಗಳು ಸುಮಾರು ₹50 ರಷ್ಟು ದುಬಾರಿಯಾಗಬಹುದು.

