ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನ ಐತಿಹಾಸಿಕ ಕರಗಕ್ಕೆ ಕೌಂಟ್‌ಡೌನ್ ಆರಂಭವಾಗಿದೆ. ಇಂದು (ಮಾರ್ಚ್ 31) ತಡರಾತ್ರಿ ಸುಮಾರು 2 ಗಂಟೆ ಸುಮಾರಿಗೆ ಸಂಪಂಗಿರಾಮನಗರದ ಸಂಪಂಗಿಕೆರೆ ಅಂಗಳದಲ್ಲಿರುವ ಶಕ್ತಿಪೀಠದಲ್ಲಿ ಹಸಿಕರಗ ನಡೆಯಲಿದೆ. ಬಳಿಕ ಏಪ್ರಿಲ್ 1ರ ಚೈತ್ರ ಪೂರ್ಣಿಮೆಯಂದು ಮಧ್ಯರಾತ್ರಿ ಪೇಟೆ ಕರಗ ನಡೆಯಲಿದ್ದು, ಭಕ್ತರಿಗೆ ದರುಶನ ದೊರೆಯಲಿದೆ.
ಈ ಬಾರಿಯ ಕರಗದಲ್ಲಿ ಬರೋಬ್ಬರಿ 10 ರಿಂದ 15 ಲಕ್ಷ ಭಕ್ತರು ಭಾಗವಹಿಸುವ ಸಾಧ್ಯತೆ ಇದೆ. ಈ ಬೆನ್ನಲ್ಲೆ ಆನ್‌ಲೈನ್‌ನಲ್ಲಿ ಕರಗದ ಹೆಸರಿನಲ್ಲಿ ಹಣ ಪೀಕುವ ಕೆಲಸ ನಡೆಯುತ್ತಿದೆ.
2,500 ರೂಪಾಯಿ ನೀಡಿದರೆ ಒಂದು ದಿನವಿಡೀ ಕರಗ ದರುಶನ, ಊಟಕ್ಕೆ ಅವಕಾಶ ಇದೆ ಎಂದು ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದ ಫೋಟೊ ವಿಡಿಯೋಗಳು ವೈರಲ್ ಆಗುತ್ತಿವೆ. ಈ ಕುರಿತು ಶ್ರೀ ಧರ್ಮರಾಯ ಸ್ವಾಮಿ ದೇವಾಲಯದ ವ್ಯವಸ್ಥಾಪನ ಸಮಿತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ದೇವಾಲಯದ ವತಿಯಿಂದ ಕರಗ ಉತ್ಸವಕ್ಕಾಗಿ ಭಕ್ತರಿಂದ ಯಾವುದೇ ರೀತಿಯ ಹಣ ವಸೂಲಿ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.



