ಹೊಸದಿಗಂತ ಡಿಜಿಟಲ್ ಡೆಸ್ಕ್:
ದಸರಾ ಮಹೋತ್ಸವ ಆರಂಭಕ್ಕೂ ಮೊದಲೇ ಮೈಸೂರಿನ ಬೀದಿಗಳು ತರಹೇವಾರಿ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತವೆ. ಇದನ್ನು ಕಣ್ತುಂಬಿಕೊಳ್ಳಲೆಂದೇ ವಿದೇಶಗಳಿಂದಲೂ ಪ್ರವಾಸಿಗರು ಸಾಂಸ್ಕೃತಿಕ ನಗರಿಗೆ ಬಂದಿಳಿಯುತ್ತಿದ್ದಾರೆ
ಈ ಬಾರಿಯೂ ಅತ್ಯಂತ ವಿಶೇಷವಾಗಿ ಮೈಸೂರನ್ನು ಸಿಂಗಾರಗೊಳಿಸಲಾಗಿದ್ದು, ಪ್ರವಾಸಿಗರ ಪ್ರಶಂಸೆಗೆ ಪಾತ್ರವಾಗಿದೆ.
ದೇವರಾಜ ಅರಸು ರಸ್ತೆ, ಕಾಳಿದಾಸ ರಸ್ತೆ, ಹುಣಸೂರು ರಸ್ತೆ ಒಳಗೊಂಡಂತೆ ಪ್ರಮುಖ ರಸ್ತೆಗಳು, ನಾಲ್ಚಡಿ ಕೃಷ್ಣರಾಜ ಒಡೆಯರ್, ಮುಮ್ಮಡಿ ಕೃಷ್ಣರಾಜ ಒಡೆಯರ್, ಜಯ ಚಾಮರಾಜೇಂದ್ರ ಒಡೆಯರ್ ಪ್ರತಿಮೆಗಳು ವಿದ್ಯುತ್ ದೀಪಾಲಂಕಾರದಲ್ಲಿ ಕಣ್ಣಿಗೆ ಹಬ್ಬ ನೀಡುತ್ತಿವೆ.
ಮಾಧ್ಯಮದವರೊಂದಿಗೆ ಮಾತನಾಡಿದ ಪ್ರವಾಸಿಗ ವೆಂಕಟ್, ದೀಪಾಲಂಕಾರ ನೋಡಲೆಂದೇ ಹೈದರಬಾದ್ ನಿಂದ ಬಂದಿದ್ದೇನೆ. ದೀಪಗಳ ನಗರವೇ ಸೃಷ್ಟಿಯಾಗಿದೆ ಎಂದರು.
ಮತ್ತೋರ್ವ ಪ್ರವಾಸಿಗರಾದ ಕವನ, ವಿದ್ಯುತ್ ದೀಪಾಲಂಕಾರಗೊಂಡ ಮೈಸೂರನ್ನು, ಮುಸ್ಸಂಜೆಯಲ್ಲಿ ಕಣ್ತುಂಬಿಕೊಳ್ಳುವುದೇ ಒಂದು ವಿಶೇಷ ಅನುಭವ ನೀಡಲಿದೆ ಎಂದರು.
ಚಾಮುಂಡೇಶ್ವರಿ ವಿದ್ಯುತ್ ನಿಗಮ ವ್ಯವಸ್ಥಾಪಕ ಕೆ.ಎಂ. ಮುನಿಗೋಪಾಲ್ ರಾಜು, ಈ ಬಾರಿ 138 ಕಿಲೋಮೀಟರ್ ರಸ್ತೆ ಹಾಗೂ 118ವೃತ್ತ 80 ಪ್ರತಿಮೆ, 51 ಕಮಾನುಗಳನ್ನು ವಿದ್ಯುತ್ ಬೆಳಕಿನಿಂದ ಅಲಂಕರಿಸಲಾಗಿದೆ.ಇದಕ್ಕಾಗಿ ಕಳೆದ ಎರಡು ತಿಂಗಳಿನಿಂದ ಅಧಿಕಾರಿಗಳು ಸತತವಾಗಿ ಪರಿಶ್ರಮ ವಹಿಸಿದ್ದಾರೆ ಎಂದು ತಿಳಿಸಿದರು.
ದಸರಾ ಸಂಭ್ರಮಕ್ಕೆ ದಿನಗಣನೆ: ಮದುವಣಗಿತ್ತಿಯಂತೆ ಸಿಂಗರಿಸಿಕೊಂಡಿದೆ ಸಾಂಸ್ಕೃತಿಕ ನಗರಿ ಮೈಸೂರು!
