Tuesday, December 30, 2025

ಹೊಸ ವರ್ಷಾಚರಣೆಗೆ ಕ್ಷಣಗಣನೆ: ಮಡಿಕೇರಿಯಲ್ಲಿ ಅಲರ್ಟ್, ಅಕ್ರಮ ಚಟುವಟಿಕೆ ಕಂಡರೆ ಕಠಿಣ ಕ್ರಮ!

ಹೊಸ ದಿಗಂತ ವರದಿ,ಮಡಿಕೇರಿ:

ಹೊಸ ವರ್ಷಾಚರಣೆ ಹೆಸರಲ್ಲಿ ಕಾನೂನು ಉಲ್ಲಂಘನೆ, ಅಕ್ರಮ ಚಟುವಟಿಕೆ ಕಂಡು ಬಂದಲ್ಲಿ ಶಿಸ್ತು ಕಾನೂನು ಕ್ರಮ ಜರುಗಿಸುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಎಚ್ಚರಿಕೆ ನೀಡದ್ದಾರೆ.

ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಹೋಂ ಸ್ಟೇ, ರೆಸಾರ್ಟ್’ಗಳಲ್ಲಿ ಸಂಭ್ರಮಾಚರಣೆ ಮಾಡಲು ಯಾವುದೇ ಅಡ್ಡಿ ಇಲ್ಲ. ಆದರೆ 10 ಗಂಟೆಯ ಬಳಿಕ ನಿಗದಿತ ಮಿತಿಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಧ್ವನಿವರ್ಧಕಗಳನ್ನು ಬಳಸಬೇಕು. ತೆರೆದ ಪ್ರದೇಶಗಳಲ್ಲಿ ಸಂಭ್ರಮಾಚರಣೆ ಮಾಡಲು ಅನುಮತಿ ಕಡ್ಡಾಯವಾಗಿದ್ದು, ಹೋಂಸ್ಟೇಗಳಲ್ಲಿ ಮಾದಕ ವಸ್ತುಗಳ ಬಳಕೆ, ಸೇವನೆ ಕಂಡು ಬಂದಲ್ಲಿ ಅದರ ಮಾಲಕರ ಮೇಲೂ ಪ್ರಕರಣ ದಾಖಲಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಹೋಂಸ್ಟೇ ಕಟ್ಟಡವನ್ನು ಬಾಡಿಗೆ ನೀಡಲಾಗಿದೆ ಎಂಬ ನೆಪ ಹೇಳುವಂತಿಲ್ಲ. ಈ ಕುರಿತು ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಭೆ ನಡೆಸಿ ಹೋಂಸ್ಟೇ ಮಾಲಕರು, ಹೋಂ ಸ್ಟೇ ನಡೆಸುವವರಿಗೂ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಪಾರ್ಟಿಗಳ ಮೇಲೆ ನಿಗಾ: ಹೋಂ ಸ್ಟೇ, ರೆಸಾಟ್‌ರ್ಗಳಲ್ಲಿ ಆಯೋಜಿಸಲಾಗುವ ಪಾರ್ಟಿಗಳ ಮೇಲೂ ನಿಗಾ ಇಡಲಾಗುತ್ತದೆ. ಅಕ್ರಮ ಚಟುವಟಿಕೆ, ಮಾದಕ ವಸ್ತು ಸೇವೆನೆ ಮಾರಾಟ, ಬಳಕೆ ಕುರಿತು ಮಾಹಿತಿ ದೊರೆತರೆ ಅಂತಹ ಕಡೆಗಳಿಗೆ ತೆರಳಿ ಸ್ಥಳ ಪರಿಶೀಲನೆ ಮಾಡಲಾಗುತ್ತದೆ. ಕಾನೂನು ಬಾಹಿರ ಕೃತ್ಯ ಕಂಡು ಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುತ್ತದೆ. ಮುಂದೆ ಅಲ್ಲಿ ಯಾವುದೇ ಉದ್ದಿಮೆಗೆ ಪೊಲೀಸ್ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ದೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಪ್ರವಾಸಿಗರು ಹೆಚ್ಚು ಸೇರುವ ಕಡೆಗಳಲ್ಲಿ ವಿಶೇಷ ಪೊಲೀಸ್ ತಂಡಗಳನ್ನು ನಿಯೋಜಿಸಲಾಗುತ್ತದೆ ಎಂದು ವಿವರಿಸಿದರು.

ರೇವ್ ಪಾರ್ಟಿ-ಪ್ರಕರಣ: ಕುಶಾಲನಗರದ ತಂಡವೊಂದು ಸೋಮವಾರಪೇಟೆ ಭಾಗದಲ್ಲಿ ಹೊಸ ವರ್ಷಾಚರಣೆ ಹೆಸರಲ್ಲಿ ರೇವ್ ಪಾರ್ಟಿ ಆಯೋಜನೆ ಮಾಡಲು ಸಿದ್ಧತೆ ನಡೆಸಿತ್ತು. ಈ ಕುರಿತು ಖಚಿತ ಮಾಹಿತಿ ಆಧರಿಸಿ ಇಬ್ಬರು ಡ್ರಗ್ ಪೆಡ್ಲರ್’ಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ, ಸಿಂಥೆಟಿಕ್ ಮಾದಕ ವಸ್ತು ಸೇವಿಸಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಈಗಾಗಲೇ ಜಿಲ್ಲೆಯ ವಿವಿಧೆಡೆ ಶಂಕಿತ 50 ಮಂದಿಯನ್ನು ವಶಕ್ಕೆ ಪಡೆದು ಡ್ರಗ್ ಸೇವನೆ ಕುರಿತು ಪರಿಶೀಲನೆ ನಡೆಸಲಾಗಿದೆ. ಮಾದಕ ವಸ್ತು ಸೇವನೆ, ಮಾರಾಟ, ಬಳಕೆ ಕುರಿತು ಹದ್ದಿನ ಕಣ್ಣಿಡಲಾಗಿದೆ. ಹೋಂಸ್ಟೇಗಳಲ್ಲಿ ಮದ್ಯ ಸರಬರಾಜು ಮಾಡಲು ಅಬಕಾರಿ‌ ಇಲಾಖೆಯಿಂದ ಅಗತ್ಯ ಅನುಮತಿ ಪಡೆದಿರಬೇಕು. ಪೊಲೀಸ್ ಪರಿಶೀಲನೆ ವೇಳೆ ಕಾನೂನು ಉಲ್ಲಂಘಿಸಿರುವುದು ಕಂಡು ಬಂದಲ್ಲಿ ಕಾನೂನು ಕ್ರಮ ಶತ ಸಿದ್ದ ಎಂದು ಹೇಳಿದರು. ಹೊಸ ವರ್ಷಾಚರಣೆ‌ ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆಯಾದಲ್ಲಿ 112 ತುರ್ತು ಸಂಖ್ಯೆಗೆ ಕರೆ ಮಾಡುವಂತೆಯೂ ರಾಮರಾಜನ್ ನುಡಿದರು.

ಈ ಸಂದರ್ಭ ನಗರ ವೃತ್ತ ನಿರೀಕ್ಷಕ ಪಿ.ಕೆ.ರಾಜು ಹಾಜರಿದ್ದರು.

error: Content is protected !!