ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಸಿಂಗೂರಿನಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ತೃಣಮೂಲ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು. ಕಳೆದ 15 ವರ್ಷಗಳ ಟಿಎಂಸಿ ಆಡಳಿತವನ್ನು ‘ಮಹಾ ಜಂಗಲ್ ರಾಜ್’ ಎಂದು ಕರೆದ ಅವರು, ಈ ಹದಯಹೀನ ಸರ್ಕಾರಕ್ಕೆ ರಾಜ್ಯದ ಜನತೆ ಶೀಘ್ರವೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಭವಿಷ್ಯ ನುಡಿದರು.
ಬಿಜೆಪಿಯು ಬಂಗಾಳದ ಸಂಸ್ಕೃತಿ ಮತ್ತು ಇತಿಹಾಸಕ್ಕೆ ನೀಡಿದ ಗೌರವವನ್ನು ಪ್ರಧಾನಿ ಎತ್ತಿ ತೋರಿಸಿದರು. “ನಮ್ಮ ಸರ್ಕಾರದ ಅವಧಿಯಲ್ಲಿ ದುರ್ಗಾ ಪೂಜೆಗೆ ಯುನೆಸ್ಕೋ ಪಟ್ಟಿಯಲ್ಲಿ ಸ್ಥಾನ ಸಿಕ್ಕಿತು, ದೆಹಲಿಯ ಕರ್ತವ್ಯ ಪಥದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಭವ್ಯ ಪ್ರತಿಮೆ ಸ್ಥಾಪಿಸಲಾಯಿತು ಮತ್ತು ಪ್ರಾದೇಶಿಕ ಭಾಷೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಯಿತು. ಆದರೆ, ಟಿಎಂಸಿ ಈ ಹಿಂದೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದಾಗ ಇಂತಹ ಯಾವುದೇ ಕಾರ್ಯಗಳನ್ನು ಮಾಡಲಿಲ್ಲ” ಎಂದು ಕಿಡಿಕಾರಿದರು.
ಟಿಎಂಸಿಗೆ ಬಿಜೆಪಿ ಮತ್ತು ಮೋದಿ ಮೇಲಿರುವ ವೈಯಕ್ತಿಕ ದ್ವೇಷದಿಂದಾಗಿ ರಾಜ್ಯದ ಸಾಮಾನ್ಯ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಪ್ರಧಾನಿ ವಿಷಾದಿಸಿದರು.
ಕೇಂದ್ರದ ‘ಪ್ರಧಾನ ಮಂತ್ರಿ ಮತ್ಸ್ಯ ಸಂಪದ’ ಯೋಜನೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಸಹಕರಿಸುತ್ತಿಲ್ಲ, ಇದರಿಂದ ಮೀನುಗಾರರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ.
ರಾಜ್ಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ‘ಪಿಎಂ ಶ್ರೀ’ ಶಾಲೆಗಳ ಪ್ರಯೋಜನವನ್ನೂ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ನಿರಾಕರಿಸುತ್ತಿದೆ ಎಂದು ಅವರು ಆರೋಪಿಸಿದರು.
ಒಟ್ಟಾರೆಯಾಗಿ, ಬಂಗಾಳದ ಸರ್ವತೋಮುಖ ಅಭಿವೃದ್ಧಿಗೆ ಬಿಜೆಪಿ ಮಾತ್ರ ಬದ್ಧವಾಗಿದೆ ಎಂದು ಹೇಳಿದ ಮೋದಿ, ರಾಜ್ಯದಲ್ಲಿ ಶೀಘ್ರವೇ ನಿಜವಾದ ಬದಲಾವಣೆ ಗಾಳಿ ಬೀಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


